ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ, ರಟ್ಟೀಹಳ್ಳಿ ಕೃಷಿ ಕೇಂದ್ರಕ್ಕೆ ಮುತ್ತಿಗೆ

KannadaprabhaNewsNetwork |  
Published : Nov 13, 2025, 01:15 AM IST
ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನಾ ರ್ಯಾಲಿ ನಡೆಸಿ ನಂತರ ಕೃಷಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು. | Kannada Prabha

ಸಾರಾಂಶ

ರಟ್ಟೀಹಳ್ಳಿ ಪ್ರತಿ ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ಕೃಷಿ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ ಬುಧವಾರ ಜರುಗಿದೆ.

ರಟ್ಟೀಹಳ್ಳಿ: ಪ್ರತಿ ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ಕೃಷಿ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ ಬುಧವಾರ ಜರುಗಿದೆ.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ರ್ಯಾಲಿ ಶಿವಾಜಿ ನಗರ, ಹಳೇ ಬಸ್‌ ಸ್ಟ್ಯಾಂಡ್‌ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಮಹಾಲಕ್ಷ್ಮೀ ವೃತ್ತ, ಭಗತ್‍ಸಿಂಗ್ ಸರ್ಕಲ್ ಮೂಲಕ ಕೃಷಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ ನೂರಾರು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ರೈತ ಬೀದಿಗೆ ಬೀಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರ್ಷ ಭೂಮಿಯಲ್ಲಿ ಅತಿ ತೇವಾಂಶದಿಂದಾಗಿ ಪ್ರತಿ ಎಕರೆಗೆ 10ರಿಂದ 15 ಕ್ವಿಂಟಲ್‌ ಇಳುವರಿ ಬಂದಿದೆ. ಅಳಿದುಳಿದ ಬೆಳೆಗಳನ್ನು ಸಂರಕ್ಷಿಸಿದ ರೈತನಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರಸ್ತುತ ವರ್ಷ ಮೆಕ್ಕೆಜೋಳ ರೇಟ್ ಪಾತಾಳಕ್ಕೆ ಕುಸಿದಿದ್ದು, ಪ್ರತಿ ಕ್ವಿಂಟಲ್‍ಗೆ ಕೇವಲ ₹1500ರಂತೆ ಮಾರಾಟವಾಗುತ್ತಿದೆ. ಹೀಗಾದರೆ ರೈತರು ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಖರ್ಚು ಮಾಡಿದ ಹಣ ಕೂಡ ಕೈಗೆ ಸಿಗದಂತಾಗಿದೆ. ಪ್ರತಿ ಕ್ವಿಂಟಲ್‍ಗೆ ₹900 ರೈತನಿಗೆ ನಷ್ಟವಾಗುತ್ತಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್‍ಗೆ ₹2400ರಿಂದ ₹2800 ಬೆಲೆ ಸಿಕ್ಕಿತ್ತು, ಪ್ರಸ್ತುತ ವರ್ಷ ರೈತನ ಜೀವನ ಬುಡಮೇಲಾಗಿದ್ದು, ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ಕಣ್ಣೊರಿಸುವ ತಂತ್ರ ಅನುಸರಿಸುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ರೈತ ಸಂಘ ಒಪ್ಪುವುದಿಲ್ಲ. ಸರ್ಕಾರಗಳಿಗೆ ಕಿಂಚಿತ್ತಾದರೂ ಮಾನ, ಮರ್ಯಾದೆ ಇದ್ದಿದ್ದೇ ಆದಲ್ಲಿ ಸರ್ಕಾರ ಮೆಕ್ಕೆಜೋಳಕ್ಕೆ ನಿಗದಿ ಮಾಡಿದ ₹2400 ಎಂಎಸ್‌ಪಿ ದರದಲ್ಲೇ ಖರೀದಿ ಮಾಡಲು ತಕ್ಷಣ ಪ್ರತಿ ತಾಲೂಕುಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು. ಕೂಡಲೇ ಬೆಳೆ ವಿಮೆ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು. ಸರ್ಕಾರ ಎರಡು ಪಂಪ್‌ಸೆಟ್‌ಗಳಿಗೆ ಒದರಂತೆ ಟಿಸಿ ನೀಡಬೇಕು. ಬ್ಯಾಂಕ್, ಫೈನಾನ್ಸ್‌ ಹಾಗೂ ಖಾಸಗಿ ಸಾಲ ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಿ, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸೀಲ್ದಾರ ಶ್ವೇತಾ ಅಮರಾವತಿ ಮನವಿ ಸ್ವೀಕರಿಸಿ ಮಾತನಾಡಿ, ಕಂದಾಯ ಇಲಾಖೆ ಹಾಗೂ ಕೃಷಿ ಅಧಿಕಾರಿಗಳ ಜಂಟಿ ಸರ್ವೇಯನ್ನು ಪಾರದರ್ಶಕವಾಗಿ ಮಾಡಿದ್ದು, ಸರ್ಕಾರದಿಂದ ಜಿಲ್ಲಾಧಿಕಾರಿಗೆ ಜಮೆಯಾಗಿದೆ. ಒಂದು ವಾರದಲ್ಲಿ ಎಲ್ಲ ರೈತರ ಖಾತೆಗಳಿಗೆ ಬೆಳೆ ವಿಮೆ ಹಣ ಜಮೆಯಾಗುವುದು ಎಂದರು.

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎಚ್.ಎಚ್‌. ಮುಲ್ಲಾ, ಪ್ರಧಾನ ಕಾರ್ಯದರ್ಶಿ ಶಂಭಣ್ಣ ಮುತ್ತಗಿ, ಬಸನಗೌಡ ಗಂಗಪ್ಪಳವರ, ಪ್ರಭುಗೌಡ ಪ್ಯಾಟಿ, ಪ್ರಶಾಂತ ದ್ಯಾವಕ್ಕಳವರ, ಎ.ಆರ್‌. ಮಣಕೂರ, ಮಂಜು ಬಾಗೋಡಿ, ಪ್ರಭು ಮುದಿವೀರಣ್ಣನವರ, ಬಸನಗೌಡ ಗಂಟೆಪ್ಪಗೌಡ್ರ, ರಾಜು ಮಳಗೊಂಡರ, ಶಣ್ಮುಖಪ್ಪ ಮಳಗೊಂಡರ, ಗಣೇಶ ತಿಪ್ಪಕ್ಕನವರ, ರುದ್ರೇಶ ದ್ಯಾವಕ್ಕಳವರ, ನಾಗಣ್ಣ ಚಪ್ಪರದಹಳ್ಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ