ಅತಿಕ್ರಮಣವಾಗಿರುವ ಗೋಮಾಳ ತೆರವಿಗೆ ಆಗ್ರಹ

KannadaprabhaNewsNetwork |  
Published : Apr 03, 2024, 01:34 AM IST
ಗೋಮಾಳ ಹಾಗೂ ಕಂದಾಯ ಜಾಗ | Kannada Prabha

ಸಾರಾಂಶ

ರಾಸುಗಳ ಮೇವಿಗಾಗಿ ಮೀಸಲಿಟ್ಟ ಗೋಮಾಳವನ್ನು ಅತಿಕ್ರಮಿಸಿ ತಮ್ಮ ಉದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಅಂಡಗಿಯ ಕೆಲ ವ್ಯಕ್ತಿಗಳು ತಮ್ಮ ಭೂದಾಹವನ್ನು ತೋರ್ಪಡಿಸಿದ್ದಾರೆ.

ಶಿರಸಿ: ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಅಂಡಗಿ ಗ್ರಾಮದಲ್ಲಿ ಗೋಮಾಳ ಮತ್ತು ಕಂದಾಯ ಇಲಾಖೆಗೆ ಸೇರಿದ ಸುಮಾರು ೫೦ ಎಕರೆ ಜಾಗ ಭೂಗಳ್ಳರ ಪಾಲಾಗಿದ್ದು, ಅತಿಕ್ರಮಣ ಇನ್ನೂ ನಡೆಯುತ್ತಲೇ ಇದೆ ಎಂಬ ಆರೋಪ ಕೇಳಿಬಂದಿದೆ.

ರಾಸುಗಳ ಮೇವಿಗಾಗಿ ಮೀಸಲಿಟ್ಟ ಗೋಮಾಳವನ್ನು ಅತಿಕ್ರಮಿಸಿ ತಮ್ಮ ಉದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಅಂಡಗಿಯ ಕೆಲ ವ್ಯಕ್ತಿಗಳು ತಮ್ಮ ಭೂದಾಹವನ್ನು ತೋರ್ಪಡಿಸಿದ್ದಾರೆ. ಸರ್ಕಾರಿ ಜಾಗವು ವೇಗವಾಗಿ, ಬಹುಪ್ರಮಾಣದಲ್ಲಿ ಅತಿಕ್ರಮಣವಾಗುತ್ತಿದ್ದರೂ ತಡೆಗಟ್ಟಬೇಕಾಗಿರುವ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗೋಮಾಳ, ಕಂದಾಯ, ಅರಣ್ಯ ಇಲಾಖೆಯ ಜಾಗ ನಿತ್ಯ ಖಾಸಗಿಯವರ ಪಾಲಾಗುತ್ತಿದೆ.

ಕಂದಾಯ ಮತ್ತು ಗೋಮಾಳ ಜಾಗದಲ್ಲಿ ಕಳೆದ ಹಲವಾರು ದಶಕಗಳಿಂದ ಎಮ್ಮೆ, ಆಕಳು, ಕುರಿಗಳು ಹುಲ್ಲು ಮೇಯುತ್ತ ಸಮೀಪದಲ್ಲಿರುವ ಕೆರೆಯಲ್ಲಿ ನೀರು ಕುಡಿಯುತ್ತಿದ್ದವು. ಈಗ ಗೋಮಾಳಗಳನ್ನು ನುಂಗಿ ಕೆರೆಗಳನ್ನೂ ಒತ್ತುವರಿ ಮಾಡಿ ನೀರು ಕುಡಿಯುತ್ತಿರುವ ದೃಶ್ಯ ಸಾಮಾನ್ಯವಾಗುತ್ತಿದೆ ಎಂಬುದು ಅನೇಕರ ದೂರಾಗಿದೆ.

ಶ್ರೀಮಂತ ವ್ಯಕ್ತಿಗಳು ರಾತ್ರೋರಾತ್ರಿ ಜೆಸಿಬಿ, ಟ್ರ್ಯಾಕ್ಟರ್ ಬಳಸಿ ಅತಿಕ್ರಮಣ ಮಾಡುತ್ತಿದ್ದಾರೆ. ಕೆಲ ಭೂಗಳ್ಳರು ಎರಡ್ಮೂರು ವರ್ಷಗಳಿಂದ ಗೋಮಾಳ ಭೂಮಿಯನ್ನು ಸಾಗುವಳಿ ಮಾಡಿ ಜೋಳ, ರಾಗಿ ಬೆಳೆಯುತ್ತಿರುವುದಲ್ಲದೆ ಅಡಕೆ ತೋಟ ನಿರ್ಮಾಣದಲ್ಲೂ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.

ಇಂದಿನ ದಿನಗಳಲ್ಲಿ ಜಾನುವಾರುಗಳ ಸಾಕಣೆ ಕಷ್ಟದ ವೃತ್ತಿಯಾದರೂ, ಕೆಲ ರೈತರು ರಾಸುಗಳನ್ನು ಸಾಕುತ್ತಿದ್ದಾರೆ. ಬರಗಾಲ ಆವರಿಸಿರುವುದರಿಂದ ಕಟ್ಟಿ ಸಾಕಲೂ ಮೇವಿಲ್ಲದೆ ಸಂಕಷ್ಟ ಎದುರಾಗಿದೆ. ಗೋಮಾಳದ ಜಾಗವೂ ಅತಿಕ್ರಮಣವಾದ್ದರಿಂದ ದನ- ಕರುಗಳಿಗೆ ಮೇಯಲು ಜಾಗವಿಲ್ಲದೇ ರೈತರು ಜಾನುವಾರುಗಳನ್ನು ಮಾರಾಟ ಮಾಡುವ ಸ್ಥಿತಿಯಲ್ಲಿದ್ದಾರೆಂಬುದು ಪರಿಸ್ಥಿತಿಯ ಗಂಭೀರತೆಯನ್ನು ತೆರೆದಿಟ್ಟಿದೆ.

ನುಣುಚಿಕೊಳ್ಳುತ್ತಿರುವ ಅಧಿಕಾರಿಗಳು: ಕಂದಾಯ ಇಲಾಖೆಯ ಸುಮಾರು ೫೦ ಎಕರೆ ಜಾಗ ಅತಿಕ್ರಮಣವಾಗುತ್ತಿದೆ ಎಂದು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದೇವೆ. ಅಧಿಕಾರಿಗಳು ಸ್ಥಳಕ್ಕಾಗಮಿಸಿ, ವಸ್ತುಸ್ಥಿತಿ ಪರಿಶೀಲಿಸಬೇಕು ಎಂದು ಸ್ಥಳೀಯ ಗ್ರಾಮಸ್ಥರು ವಿನಂತಿಸಿದ ಹಿನ್ನೆಲೆ ಶಿರಸಿ ಸಹಾಯಕ ಆಯುಕ್ತ ಹಾಗೂ ತಹಸೀಲ್ದಾರರು ಪರಿಶೀಲಿಸಿ ಅತಿಕ್ರಮಿತ ಪ್ರದೇಶವನ್ನು ಖುಲ್ಲಾಪಡಿಸಲು ಆದೇಶ ನೀಡಿದ್ದರು. ನಂತರ ಬನವಾಸಿ ಉಪತಹಸೀಲ್ದಾರ್‌, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮಕ್ಷಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಪೂರ್ಣ ಕ್ಷೇತ್ರದ ಚಿತ್ರಣವನ್ನು ಮೇಲಧಿಕಾರಿಗಳಿಗೆ ತಿಳಿಸಿ, ಸಂಪೂರ್ಣ ಜಾಗವನ್ನು ಸರ್ವೇ ಮಾಡಿಸಿ, ಖುಲ್ಲಾಪಡಿಸಲಾಗುತ್ತದೆ ಎಂದು ಹೇಳಿದ್ದರು. ಇದಾಗಿ ವರ್ಷ ಕಳೆದರೂ ಅಧಿಕಾರಿಗಳು ಮಾತ್ರ ಈ ಕಡೆ ಮುಖ ಹಾಕಿಲ್ಲ. ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರು ಸ್ಥಳ ಪರಿಶೀಲಿಸಿ, ತಕ್ಷಣ ಸರ್ಕಾರಿ ಜಾಗ ವಶಪಡಿಸಿಕೊಳ್ಳುವ ಕ್ರಮ ಜರುಗಿಸಬೇಕು ಎಂದು ಸ್ಥಳೀಯರಾದ ಬಸಪ್ಪ ನಾಯ್ಕ, ಕರಿಬಸಪ್ಪ ಗೌಡರ್, ಕಲ್ಲಪ್ಪ ಗೌಡ, ನಿಂಗಪ್ಪ ಶಿವಪ್ಪ ಗೌಡ ಸೇರಿದಂತೆ ಬಹಳಷ್ಟು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಜಕೀಯ ಒತ್ತಡಕ್ಕೆ ಮಣಿಯದಿರಲು ಆಗ್ರಹ

ಅಂಡಗಿ ಗೋಮಾಳ ಅಂಚಿನಲ್ಲಿ ಕಂದಕ ನಿರ್ಮಾಣಕ್ಕೆ ₹೩ ಲಕ್ಷ ಮತ್ತು ಗೋಮಾಳದ ಗಡಿ ಅಂಚಿನಲ್ಲಿ ಸಸಿ ನಾಟಿ ಮಾಡಲು ₹೧ ಲಕ್ಷ ಮಂಜೂರಾದರೂ ಕಾಮಗಾರಿ ಮಾತ್ರ ಆರಂಭಿಸಿಲ್ಲ. ಈ ಕುರಿತು ವಿಚಾರಿಸಿದಾಗ, ಮೇಲಧಿಕಾರಿಗಳು ಸರ್ವೇ ಮಾಡಿ ಗುರುತಿಸಿಕೊಟ್ಟಲ್ಲಿ ಕಂದಕ ನಿರ್ಮಾಣ ಮಾಡುವುದಾಗಿ ಗ್ರಾಪಂನವರು ಹೇಳುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿಯದೇ ಪೊಲೀಸ್ ಇಲಾಖೆಯ ಬಂದೋಬಸ್ತ್‌ನಲ್ಲಿ ಭೂಗಳ್ಳರ ಪಾಲಾದ ಸರ್ಕಾರದ ಆಸ್ತಿ ವಶಪಡಿಸಿಕೊಳ್ಳಲು ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ