ದರೋಜಿ-ಬಾಗಲಕೋಟೆ ರೈಲ್ವೆ ಮಾರ್ಗ ವಿಸ್ತರಿಸಿ: ಎಚ್.ಆರ್. ಶ್ರೀನಾಥ

KannadaprabhaNewsNetwork | Published : Jul 13, 2024 1:34 AM

ಸಾರಾಂಶ

ಬಳ್ಳಾರಿ ಜಿಲ್ಲೆಯ ದರೋಜಿಯಿಂದ ಬಾಗಲಕೋಟೆಗೆ ರೈಲು ಮಾರ್ಗ ವಿಸ್ತರಿಸಬೇಕು ಎಂದು ರೈಲ್ವೆ ಹೋರಾಟ ಸಮಿತಿ ಸಂಚಾಲಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರು ಗಂಗಾವತಿಯಲ್ಲಿ ಒತ್ತಾಯಿಸಿದ್ದಾರೆ.

ಗಂಗಾವತಿ: ಬಳ್ಳಾರಿ ಜಿಲ್ಲೆಯ ದರೋಜಿಯಿಂದ ಬಾಗಲಕೋಟೆಗೆ ರೈಲು ಮಾರ್ಗ ವಿಸ್ತರಿಸಬೇಕು ಎಂದು ರೈಲ್ವೆ ಹೋರಾಟ ಸಮಿತಿ ಸಂಚಾಲಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಒತ್ತಾಯಿಸಿದರು.

ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರು ತೆರಳಿ ದರೋಜಿ- ಬಾಗಲಕೋಟೆ ವರೆಗೂ ರೈಲು ಮಾರ್ಗ ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೊಪ್ಪಳ ಸಂಸದರಾಗಿದ್ದ ಸಂಗಣ್ಣ ಕರಡಿ ಅವರು ಸಹ ಸರ್ವೆ ಕಾರ್ಯಕ್ಕೆ ಅನುದಾನ ನೀಡಿದ್ದರು. ಈಗ ಕೆಲವು ನಾಯಕರು ದರೋಜಿ ಬಾಗಲಕೋಟೆ ಮರೆತು ಕೇವಲ ಗಂಗಾವತಿ ದರೋಜಿ ಮಾರ್ಗಕ್ಕೆ ರೈಲ್ವೆ ಸಚಿವರಿಗೆ ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದರು. ದರೋಜಿ ಬಾಗಲಕೋಟೆ ರೈಲು ಓಡಾಟದಿಂದ ಮಾರ್ಗದಲ್ಲಿ ಬರುವ ಐತಿಹಾಸಿಕ ಸ್ಥಳಗಳು ಅಭಿವೃದ್ದಿಯಾಗುತ್ತವೆ. ಪ್ರಮುಖವಾಗಿ ಅಂಜನಾದ್ರಿ, ಕನಕಗಿರಿ, ಇಲಕಲ್ , ಬದಾಮಿ, ಬನಶಂಕರಿ ದೇಗುಲುಗಳು ಹಾಗೂ ವಿಜಯಪುರದ ಐತಿಹಾಸಿಕ ಸ್ಥಳ ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಕಾರಣ ರೈಲ್ವೆ ಸಚಿವರು, ರಾಜ್ಯದ ಮುಖ್ಯಮಂತ್ರಿ ಈ ಭಾಗದ ರೈಲು ಮಾರ್ಗಕ್ಕೆ ಪ್ರಾಶಸ್ತ್ಯ ನೀಡಬೇಕು ಮತ್ತು ಈ ಕುರಿತು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಗಿಣಗೇರಾ ಗದ್ವಾಲ್ ರೈಲು ಮಾರ್ಗದ ಹೋರಾಟ ಫಲವಾಗಿ ಈಗ ಗಂಗಾವತಿ ನಗರಕ್ಕೆ ರೈಲ್ವೆ ಭಾಗ್ಯ ದೊರಕಿದೆ. ಅದರಂತೆ ದರೋಜಿ ಬಾಗಲಕೋಟೆ ರೈಲು ಮಾರ್ಗದಿಂದ ತೀರಾ ಹಿಂದುಳಿದ ಪ್ರದೇಶವಾಗಿರುವ ಕನಕಗಿರಿ, ತಾವರಗೇರಾ, ಇಲಕಲ್ ಸೇರಿದಂತೆ ಕೆಲವು ಒಣ ಬೇಸಾಯ ಪ್ರದೇಶದವರಿಗೆ ರೈಲ್ವೆ ಮಾರ್ಗಕ್ಕೆ ಅನುಕೂಲವಾಗುತ್ತದೆ ಎಂದರು.

ಕೆಲವು ಮುಖಂಡರು ಕೇವಲ ಗಂಗಾವತಿ- ದರೋಜಿ ಮಾರ್ಗದ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಪಕ್ಷಾತೀತವಾಗಿ ಹೋರಾಟ ನಡೆಯಬೇಕಾಗಿದೆ ಎಂದರು.

ರೈಲ್ವೆ ಹೋರಾಟ ಸಮಿತಿಯ ದುರ್ಗಾದಾಸ ಯಾದವ್ ಕನಕಗಿರಿ, ಬಿ.ಎಂ. ಮೃತ್ಯಂಜಯಸ್ವಾಮಿ, ಯಂಕರೆಡ್ಡಿ ಓಣಿಮಮಿ, ರಂಗಪ್ಪ, ಚೇತನ್ ಯಾದವ್ , ರಾಜಶೇಖರಪ್ಪ ಮೂಷ್ಟೂರು, ಸುರೇಶ ಗೌರಪ್ಪ ಇತರರು ಇದ್ದರು.

Share this article