ಲೋಕಸಭೆ, ವಿಧಾನಸಭೆಯಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಲು ಆಗ್ರಹ

KannadaprabhaNewsNetwork | Published : Feb 5, 2025 12:30 AM

ಸಾರಾಂಶ

ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮಾನವ ಸರಪಳಿ ರಚಿಸಿ ನಿರ್ಮಿಸಿ ಹಕ್ಕೋತ್ತಾಯ ಮಂಡಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇವಲ ಮೂರುವರೆ ಸಾವಿರದಷ್ಟಿರುವ ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ‘ಸಂಘ’ ವರ್ಚುವಲ್ ಇಂಟ್ಯಾಂಜಿಬಲ್ (ಅದೃಶ್ಯ) ಮತ ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ, ಕೊಡವ ಸಾಂಪ್ರದಾಯಿಕ ಆವಾಸಸ್ಥಾನವನ್ನು ಒಳಗೊಂಡಿರುವ ವಿಶೇಷ ಕೊಡವ ಅಸೆಂಬ್ಲಿ ಮತ್ತು ಸಂಸದೀಯ ಕ್ಷೇತ್ರವನ್ನು ರಚಿಸಬೇಕು. ಆ ಮೂಲಕ ನಮಗೆ ಕೇಂದ್ರ ವಿಸ್ತಾ ಅರ್ಥಾತ್ ಹೊಸ ಪಾರ್ಲಿಮೆಂಟ್ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಹಕ್ಕೋತ್ತಾಯ ಮಂಡಿಸಿತು.

ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್. ಯು. ನಾಚಪ್ಪ ಅವರು ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ‘ಸಂಘ’ ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ಅಸೆಂಬ್ಲಿಯಲ್ಲಿ ಆದಿಮಸಂಜಾತ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ, ಆದಿಮಸಂಜಾತ ಕೊಡವರಿಗೆ ಕೊಡವ ಸಂಪ್ರದಾಯಿಕ ಜನ್ಮಭೂಮಿಯಲ್ಲಿ ಪ್ರತ್ಯೇಕ ಲೋಕಸಭೆ ಮತ್ತು ಅಸಂಬ್ಲಿ ಕೊಡವ ಮತ ಕ್ಷೇತ್ರವನ್ನು ರಚಿಸಬೇಕು ಎಂದು ಪ್ರತಿಪಾದಿಸಿದರು.

2026ರಲ್ಲಿ ಸಂಸತ್ತಿನ ಮತ್ತು ಅಸೆಂಬ್ಲಿಯ ಕ್ಷೇತ್ರದ ಗಡಿ ಮತ್ತು ಸಂಖ್ಯೆ ಪುನರ್ ನಿರ್ಣಯಿಸಲಾಗುತ್ತದೆ. ಇದಕ್ಕಾಗಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇದರ ದುರ್ಲಾಭವನ್ನು ಪಡೆದುಕೊಂಡು ಕೊಡವ ವಿರೋಧಿಗಳು ಆದಿಮಸಂಜಾತ ಕೊಡವರನ್ನು ಹಣಿದು ಅಂಚಿಗೆ ಹಾಕಲು ಸಂಚು ಹೂಡುತ್ತಿದ್ದಾರೆ. ರಾಜ್ಯದಲ್ಲಿ ಗರಿಷ್ಠ ಪ್ರಾತಿನಿಧ್ಯವನ್ನು ಹೊಂದಿರುವ ಜನಸಂಖ್ಯಾ ಪ್ರಾಬಲ್ಯದ ಕೂಟ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ನಿರ್ಮಿಸುವ ನೆಪದಲ್ಲಿ ಸುಳ್ಯ ತಾಲೂಕನ್ನು ಕೊಡಗಿಗೆ ಸೇರಿಸಿ ಪ್ರತ್ಯೇಕ ಕೊಡಗು ಲೋಕಸಭಾ ಕ್ಷೇತ್ರ ನಿರ್ಮಿಸಿ ಶಾಶ್ವತವಾಗಿ ತಾವು ಸಂಸತ್ ಪ್ರಾತಿನಿಧ್ಯ ಪಡೆಯುವುದರೊಂದಿಗೆ ಕೊಡವರಿಗೆ ಪ್ರಾತಿನಿಧ್ಯ ಸಂಸತ್ತಿನಲ್ಲಿ ದಕ್ಕದಂತೆ ಒಳಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ, ರೇಖಾ ನಾಚಪ್ಪ, ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಚೋಳಪಂಡ ಜ್ಯೋತಿ, ನಂದಿನೆರವಂಡ ನಿಶಾ, ಅಪ್ಪಾರಂಡ ನಂದಿನಿ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಪಟ್ಟಮಾಡ ಕುಶ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಚಂಬಂಡ ಜನತ್, ಬೊಟ್ಟಂಗಡ ಗಿರೀಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಕಿರಿಯಮಾಡ ಶೆರಿನ್, ಮೇದುರ ಕಂಠಿ, ಬಾಚಿನಾಡಂಡ ಗಿರಿ ಮತ್ತಿತರರು ಇದ್ದರು.

ಈ ಸಂದರ್ಭ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಕ್ಕೊತ್ತಾಯ ಮಂಡಿಸಿದರು.

Share this article