ಕನಕಪುರ: ರಾಜ್ಯದ ನೂತನ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ರೈತ ಸಮಸ್ಯೆಗಳಿಗೆ ಸ್ಪಂದಿಸಲು ಕೂಡಲೇ ಕೃಷಿ ಪಶುಸಂಗೋಪನೆ, ಶಿಕ್ಷಣ ಇಲಾಖೆ ಸಚಿವರನ್ನು ನೇಮಿಸುವಂತೆ ತಾಲೂಕು ರೈತ ಸಂಘದ ಮುಖಂಡರು ಆಗ್ರಹಿಸಿದರು. ನಗರದ ರೈತ ಸಂಘದ ಕಚೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ್ದಾರೆ. ನಮ್ಮ ತಾಲೂಕಿನವರೆಂಬ ಹೆಮ್ಮೆ ನಮಗೂ ಇದೆ. ರೈತರು ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದಾರೆ. ಸಕಾಲದಲ್ಲಿ ಮಳೆಯಾಗದೆ ಜನ ಹಾಗು ಜಾನುವಾರುಗಳಿಗೆ ಮೇವು, ನೀರಿನ ಕೊರತೆಯೂ ಇದೆ. ರೈತರಿಗೆ ಸ್ಪಂದಿಸುವ ಸಚಿವರಿಲ್ಲದೆ ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಆದಷ್ಟೂ ಬೇಗ ಸಂಬಂಧಪಟ್ಟ ಸಚಿವರನ್ನು ನೇಮಿಸುವಂತೆ ಆಗ್ರಹಿಸಿದರು.
ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಸಚಿವರಿಲ್ಲದ ಇಲಾಖೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರಾಗಿದ್ದು ಭ್ರಷ್ಟಾಚಾರ ತಾಂಡವಾಡುತ್ತಿದೆ. ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಿರುವುದು ಸ್ವಾಗತಾರ್ಹ. ಶಾಲಾ ದಾಖಲಾತಿ ಪ್ರಾರಂಭವಾಗಿದೆ. ಆದರೆ ಶಿಕ್ಷಣ ಸಚಿವರೇ ಇಲ್ಲ, ನಿಮ್ಮ ಸರ್ಕಾರದ ಅಧಿಕಾರಿಗಳು ಈ ಯೋಜನೆಯನ್ನು ತಲುಪಿಸಲು ವಿಫಲರಾಗಿದ್ದರೆ ನೂತನ ಸರ್ಕಾರ ರಚನೆಯಾಗಿ ಬಹಳಷ್ಟು ದಿನಗಳು ಉರುಳಿದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿಲ್ಲ. ಕೂಡಲೇ ಸಚಿವರನ್ನು ನೇಮಿಸುವಂತೆ ಒತ್ತಾಯಿಸಿದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಬಸುರಾಜು, ಕೋಡಿಹಳ್ಳಿ ಕುಮಾರ್, ತಾಲೂಕು ಅಧ್ಯಕ್ಷ ಪುಟ್ಟಮಾದೇಗೌಡ, ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶಿವಲಿಂಗ ಮುಖಂಡರಾದ ಶಿವರಾಜು, ಶಿವಸ್ವಾಮಿ, ರಂಗಪ್ಪ, ಮರಿಯಪ್ಪ, ಸಿದ್ದರಾಜು, ಅನಿಲ್, ಕೆಂಪಣ್ಣ ಮುಂತಾದವರು ಹಾಜರಿದ್ದರು.
ಕನಕಪುರ ರೈತ ಸಂಘದ ಕಚೇರಿಯಲ್ಲಿ ರೈತ ಸಂಘದ ಮುಖಂಡರು ಸಭೆ ಸೇರಿ ಕೂಡಲೇ ಕೃಷಿ ಸಚಿವರನ್ನು ನೇಮಿಸುವಂತೆ ಆಗ್ರಹಿಸಿದರು.