ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾನೂನು ಸಲಹೆಗಾರ, ಹಿರಿಯ ವಕೀಲ ಕೆ.ಆರ್.ಮಲ್ಲೇಶ ನಾಯ್ಕ, ಇಂದಿಗೂ ರಾಜ್ಯಾದ್ಯಂತ ತಾಂಡಾಗಳಲ್ಲಿ ಕನಿಷ್ಟ ಮೂಲ ಸೌಕರ್ಯಗಳೂ ಇಲ್ಲದೇ, ನಮ್ಮ ಸಮುದಾಯದ ಜನರು ಸಂಕಷ್ಟದ ಬಾಳು ಬಾಳುತ್ತಿದ್ದು, ಅಂತಹವರಿಗೆ ನೆಮ್ಮದಿ ಬಾಳು ಕಟ್ಟಿಕೊಡುವ ಕೆಲಸ ನಿಗಮದ ಜೊತೆಗೆ ಸರ್ಕಾರದಿಂದಲೂ ಆಗಬೇಕು ಎಂದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎನ್.ಜಯದೇವ ನಾಯ್ಕರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರಿಗೆ ಸಂಘ ಅಭಿನಂದನೆ ಸಲ್ಲಿಸುತ್ತದೆ. ರಾಜ್ಯಾದ್ಯಂತ ತಾಂಡಾಗಳ ಮೂಲ ಸೌಕರ್ಯ ಕೊರತೆ ನೀಗಿಸುವ ಸದುದ್ದೇಶದಿಂದ ಸ್ಥಾಪಿತ ತಾಂಡಾ ಅಭಿವೃದ್ಧಿ ನಿಗಮದ 6ನೇ ಅಧ್ಯಕ್ಷರಾಗಿ ಎನ್.ಜಯದೇವನಾಯ್ಕರನ್ನು ನೇಮಕ ಮಾಡಿದ ಸರ್ಕಾರದ ಕ್ರಮ ಸೂಕ್ತವಾಗಿದೆ. ಇದು ಬಂಜಾರ ಜನಾಂಗದಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ತಿಳಿಸಿದರು.ಸಮಾಜದ ಹಿರಿಯ ನಾಯಕರು, ರಾಜಕೀಯ ಹೋರಾಟಗಾರರಾರೂ ಆಗಿದ್ದ ಸಮಾಜಕ್ಕಾಗಿ ಶ್ರಮಿಸಿದ ಜಯದೇವ ನಾಯ್ಕರು ರಾಜ್ಯಾದ್ಯಂತ ಪ್ರವಾಸ ಮಾಡಿ, ತಾಂಡಾ ನಿವಾಸಿಗಳ ಜೀವನ, ಸ್ಥಿತಿಗತಿಯನ್ನು ತೀರಾ ಸನಿಹದಿಂದ ಅರಿತವರು. ನಿಗಮ ಸ್ಥಾಪನೆಗಾಗಿ ಹೋರಾಟ ಮಾಡಿದವರಲ್ಲಿ ಮುಂಚೂಣಿಯಲ್ಲಿದ್ದವರು. ಇಂತಹವರನ್ನು ನಿಗಮದ ಅಧ್ಯಕ್ಷರಾಗಿ ನೇಮಿಸಿದ್ದು ಉತ್ತಮ ಕಾರ್ಯ, ಸಮಂಜಸ ಕ್ರಮವಾಗಿದೆ ಎಂದರು.
ಬಂಜಾರ ಸಮಾಜದ ಅವಿದ್ಯಾವಂತರು, ಮಹಿಳೆಯರು, ಮಕ್ಕಳು ಗುಳೇ ಹೋಗಿ ಜೀವಿಸುತ್ತಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ತಮ್ಮ ಹೆರಿಗೆ ದಿನವೂ ಗೊತ್ತಿರುವುದಿಲ್ಲ. ಗರ್ಭಿಣಿಯರು ಕಟ್ಟಿಗೆ ತರಲು, ಜಮೀನು ಕೆಲಸಕ್ಕೆ ಹೋದಾಗ, ರಾಸು ಮೇಯಿಸಲು ಹೋದಾಗಲೇ ಹೆರಿಗೆಯಾದ ಸಾಕಷ್ಟು ನಿದರ್ಶನವಿದೆ. ತಾಂಡಾದಲ್ಲಿ ಹಸುಗೂಸುಗಳು, ಮಕ್ಕಳು, ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಗುರುತಿಸುವ ಕಾರ್ಯವು ಸೂಕ್ತವಾಗಿ ಸಾಗುತ್ತಿಲ್ಲ ಎಂದು ದೂರಿದರು.
ಸಂಘದ ಕುಬೇರ ನಾಯ್ಕ, ಎಲ್.ಗಾಯಕ್, ನಂಜಾನಾಯ್ಕ ಎಸ್.ಕಬ್ಬಳ ಇತರರು ಇದ್ದರು.