ಆಶಾ ಕಾರ್ಯಕರ್ತರಿಗೆ ಮಾಸಿಕ ಗೌರವಧನ ಹೆಚ್ಚಳಕ್ಕೆ ಆಗ್ರಹ

KannadaprabhaNewsNetwork |  
Published : May 16, 2026, 12:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್‌ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ)ದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್‌ಗೆ ಮನವಿ ಸಲ್ಲಿಸಿದರು.

ರಾಜ್ಯದ ಆಶಾ ಕಾರ್ಯಕರ್ತೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ-ಪ್ರೋತ್ಸಾಹಧನ ಪ್ರತೀ ತಿಂಗಳು ಬರುತ್ತಿಲ್ಲ. ಈಗಲೂ 3 ರಿಂದ ನಾಲ್ಕು ತಿಂಗಳವರೆಗೆ ಕೇಂದ್ರದ ಪ್ರೋತ್ಸಾಹಧನ ಬಾಕಿ ಇದೆ. ಎರಡು ತಿಂಗಳ ತಿಂಗಳ ಗೌರವಧನ ಬಾಕಿ ಇದೆ. ಪ್ರತೀ ತಿಂಗಳು ವೇತನ ನಿಗದಿತವಾಗಿ ಬರುತ್ತಿಲ್ಲವೆಂದು ನೋವು ತೋಡಿಕೊಂಡರು.

ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಕೇಂದ್ರದ ಪ್ರೋತ್ಸಾಹಧನ ಬರುತ್ತಿಲ್ಲ. ಹಲವಾರು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆಂಟ್‌ಗಳ ಹಣ ಬಿಡುಗಡೆ ಆಗಿಲ್ಲ. (ಟಿಬಿ, ಟಿಬಿಐ, ಎನ್ಸಿಡಿ ಇತ್ಯಾದಿ) ಆಶಾ ಕಾರ್ಯಕರ್ತೆಯರ ಗೌರವಧನ, ಪ್ರೋತ್ಸಾಹಧನ ಹಲವಾರು ತಿಂಗಳು ಕಡಿತ ಮಾಡಲಾಗಿದೆ. ಜಿಲ್ಲಾ, ತಾಲೂಕು ಹಂತದಲ್ಲಿ ಸಮಸ್ಯೆಗಳ ಬಗ್ಗೆ ಬಗೆಹರಿಸಲು ಕೇಳಿದರೆ, ಇದು ರಾಜ್ಯವಾಪಿ ಇರುವ ಸಮಸ್ಯೆಯೆಂದು ಹೇಳಿ ಪರಿಹಾರ ನೀಡುತ್ತಿಲ್ಲ. ಈ ನಿಲುವುಗಳಿಂದಾಗಿ ಒಟ್ಟಾರೆ ಕಾರ್ಯಕರ್ತೆಯರು ಸಂಕಷ್ಟದಲ್ಲಿದ್ದಾರೆಂದು ಪ್ರತಿಭಟನಾಕಾರರು ದೂರಿದರು.

ಮತ್ತೊಂದೆಡೆ ಉಪ ನಿರ್ದೇಶಕರು, ಇಎಮ್‌ಎಸ್ ಮತ್ತು ಆಶಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರ ಪತ್ರದ ಅನ್ವಯ ಏಪ್ರಿಲ್‌ 21-2026ರಂತೆ 9 ವಿವಿಧ ಸೇವೆಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯೆ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಪ್ರತೀ ಕಾರ್ಯಕರ್ತೆಗೆ 500 ರಿಂದ ಒಂದು ಸಾವಿರದವರೆಗೆ ಪ್ರೋತ್ಸಾಹಧನ ಕಡಿತವಾಗಲಿದೆ. ಈ ಕೆಲಸಗಳನ್ನು ಆಶಾ ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ತಾಯಿ-ಮಗು ಸುರಕ್ಷತೆಗೆ, ಬಡ ಜನತೆಯ ಆರೋಗ್ಯಕ್ಕೆ ಅತ್ಯಂತ ಅಗತ್ಯ ಇರುವ ಚಟುವಟಿಕೆ ಆಗಿವೆ. ಈಗ ಕಾರ್ಯಕರ್ತೆಯರು ಈ ಸೇವೆಗಳನ್ನು ನೀಡದಿದ್ದಲ್ಲಿ ಜನರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆಶಾ ಕಾರ್ಯಕರ್ತೆಯರ ಬಾಕಿ ಇರುವ ಗೌರವಧನ, ಪ್ರೋತ್ಸಾಹ ಧನ ತಕ್ಷಣ ಬಿಡುಗಡೆ ಮಾಡಬೇಕು, ಸಮಸ್ತ ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು,

ಮೌಲ್ಯಮಾಪನ ಹೆಸರಲ್ಲಿ ಆಶಾಗಳಿಗೆ ಆಗುತ್ತಿರುವ ಶೋಷಣೆ ನಿಲ್ಲಿಸಬೇಕು, ನಿವೃತ್ತಿ ಆಗಿರುವ ಆಶಾಗಳಿಗೆ ಇರುವ ಇಡಿಗಂಟು ನೀಡಬೇಕು, ಜನವರಿ 2025ರಲ್ಲಿ ಮುಖ್ಯ ಮಂತ್ರಿಗಳು ಘೋಷಿಸಿದ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಕನಿಷ್ಟ ಮಾಸಿಕ 10 ಸಾವಿರ ಗೌರವಧನ ನೀಡಲು ಸೂಕ್ತಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಐಯುಟಿಯುಸಿ ಜಿಲ್ಲಾ ಮುಖಂಡರಾದ ರವಿಕುಮಾರ್, ಆಶಾ ಸಂಘದ ಜಿಲ್ಲಾಧ್ಯಕ್ಷ ಗಿರಿಜಮ್ಮ, ಲಕ್ಷ್ಮಿಬಾಯಿ, ಗುರುಶಾಂತ, ನಾಗವೇಣಿ, ಆಶಾ ಕಾರ್ಯಕರ್ತೆಯರಾದ ಪುಟ್ಟಮ್ಮ, ಸವಿತ, ನೇತ್ರಾವತಿ, ಫಾತೀಮಾ ಪ್ರತಿಭಟನೆ ನೇತೃತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

7 ವರ್ಷವಾದರೂ ಪೂರ್ಣಗೊಳ್ಳದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
ಬೇಲೂರು ಪುರಸಭೆ ನೂತನ ಅಧ್ಯಕ್ಷ ಅಕ್ರಂ ಶರೀಫ್ ರಿಗೆ ಗಾಣಿಗರ ಸಂಘದಿಂದ ಸನ್ಮಾನ