- ಪ್ರತಿ ಕ್ಷೇತ್ರದಲ್ಲೂ ವಿಫಲವಾದ ಮೋದಿ ಆಡಳಿತ, ರಾಜೀನಾಮೆ ಸೂಕ್ತ: ಡಿ.ಬಸವರಾಜ ಹೇಳಿಕೆ - - -
ಬೆಲೆ ಏರಿಕೆ, ವಿದೇಶ ವ್ಯವಹಾರ, ಆರ್ಥಿಕ ಕ್ಷೇತ್ರ ಒಳಗೊಂಡಂತೆ ಎಲ್ಲ ಕ್ಷೇತ್ರದಲ್ಲೂ ಸಂಪೂರ್ಣ ವಿಫಲವಾದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಒಳಿತು ಮಾಡುವುದಿದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಒತ್ತಾಯಿಸಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮೋದಿಯವರು ಇದೇ ರೀತಿ ಅಧಿಕಾರದಲ್ಲಿ ಮುಂದುವರಿದರೆ ದೇಶಕ್ಕೆ ದೊಡ್ಡ ಗಂಡಾಂತರ ತಪ್ಪಿದ್ದಲ್ಲ ಎಂದರು.ಮಧ್ಯ ಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ತಿಂಗಳಾದರೂ ತೈಲ, ಅನಿಲ ಬೆಲೆ ಹೆಚ್ಚಳದ ಬಗ್ಗೆ ನರೇಂದ್ರ ಮೋದಿಯವರಿಗೆ ಗೊತ್ತಿರಲಿಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣಾ ಪ್ರಚಾರದ ವೇಳೆಯೂ ಅದೆಲ್ಲಾ ನೆನಪಿಗೆ ಬರಲಿಲ್ಲ. ಐದೂ ರಾಜ್ಯಗಳ ಚುನಾವಣೆ ಮುಗಿದು, ಫಲಿತಾಂಶ ಬರುತ್ತಿದ್ದಂತೆ ಜ್ಞಾನೋದಯವಾಗಿ, ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡಿ ಎಂಬ ಹೇಳಿಕೆ ಜೊತೆಗೆ ಅದರ ದರ ಹೆಚ್ಚಿಸಿದ್ದಾರೆ ಎಂದು ಅವರು ಟೀಕಿಸಿದರು.
ಮೋದಿ ಸರ್ಕಾರದ ವಿದೇಶಾಂಗ ನೀತಿಗಳ ಪರಿಣಾಮವಾಗಿ ದೇಶ ಇಂದು ಸಂಕಷ್ಟಗಳನ್ನು ಅನುಭವಿಸುತ್ತಿದೆ. ನೆರೆಯ ದೇಶಗಳ ಜೊತೆಗೆ ಉತ್ತಮ ಸಂಬಂಧವನ್ನೇ ಹೊಂದಿಲ್ಲ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಜಗತ್ತಿನ ಮುಂದೆ ಭಾರತ ತಲೆ ತಗ್ಗಿಸುವಂತಾಗಿದೆ. ನರೇಂದ್ರ ಮೋದಿಯೆಂದರೆ ದುಬಾರಿ ಎನ್ನುವಂತೆ ತೈಲ, ಅನಿಲ ಬೆಲೆ ದಿನದಿನಕ್ಕೂ ಏರಿಕೆಯಾಗುತ್ತಿದ್ದು, ಜನಜೀವನಕ್ಕೆ ಒಂದಲ್ಲ ಒಂದು ರೀತಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ ಎಂದು ಆರೋಪಿಸಿದರು.
- - -
- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.
-15ಕೆಡಿವಿಜಿ3: