ಹುಬ್ಬಳ್ಳಿ:
ಇಲ್ಲಿನ ಚೆನ್ನಮ್ಮ ವೃತ್ತದಿಂದ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯದ್ವಾರದ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನಟಿ ಪೂಜಾ ಗಾಂಧಿ ಪಾಲ್ಗೊಂಡು ಗಮನ ಸೆಳೆದರು.
ಬಳಿಕ ನಡೆದ ಸಭೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು, ಈ ಕುರಿತು ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಜ. 26ರೊಳಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ, ವಿಜಯಪುರ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಮೊಗ್ಗ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ನಾಮಕರಣಗೊಳಿಸುವಂತೆ ಒತ್ತಾಯಿಸಿದರು.ಈ ವೇಳೆ ಮಾತನಾಡಿದ ನಟಿ ಪೂಜಾ ಗಾಂಧಿ, ಈ ನಾಲ್ಕು ಮಹನೀಯರು ವಿಶ್ವ ಜ್ಯೋತಿಗಳು. ಈ ಹೋರಾಟ ನಾಡಿನ ಏಳುಕೋಟಿ ಕನ್ನಡಿಗರ ಧ್ವನಿಯಾಗಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗನೆ ತೀರ್ಮಾನ ಕೈಗೊಂಡು ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಜರಾಮರವಾಗಿ ಉಳಿಯುವಂತೆ ಮಾಡಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ನಾವೇನು ಮನೆಗೆ ನಮ್ಮ ಹೆಸರು ಇಡುವಂತೆ ಕೇಳುತ್ತಿಲ್ಲ. ವಿಮಾನ ನಿಲ್ದಾಣಗಳಿಗೆ ನಾಡಿನ ಮಹನೀಯರ ನಾಮಕರಣಗೊಳಿಸುವಂತೆ ಮನವಿ ಮಾಡಿದ್ದೇವೆ. ಇದರೊಂದಿಗೆ ಮಹದಾಯಿ ಯೋಜನೆ ಅನುಷ್ಠಾನಕ್ಕೂ ಒತ್ತಾಯಿಸೋಣ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜ. 26 ರೊಳಗೆ ಅನುಮತಿ ಕೊಡಿಸುವ ಭರವಸೆಯಿದೆ. ನಮಗೆ ಸ್ಪಂದನೆ ದೊರೆಯದೇ ಇದ್ದಲ್ಲಿ ಮುಂದೆ ಬೆಂಗಳೂರು ಮತ್ತು ದೆಹಲಿ ಚಲೋ ಹೋರಾಟ ಆರಂಭಿಸೋಣ ಎಂದು ಹೇಳಿದರು.ಹೋರಾಟದ ನೇತೃತ್ವ ವಹಿಸಿದ್ದ ಮುಖಂಡ ಶಿವಾನಂದ ಮುತ್ತಣ್ಣವರ, ನಮ್ಮ ನಾಡಿಗೆ ಕೊಡುಗೆ ನೀಡಿದ ಮಹನೀಯರ ಹೆಸರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೇಂದ್ರದ ಸಚಿವರು ವಿಮಾನ ನಿಲ್ದಾಣಗಳಿಗೆ ಅವರ ಹೆಸರು ನಾಮಕರಣ ಮಾಡಿಸಲಿ. ಒಂದು ವೇಳೆ ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಮಾರ್ಚ್ 28ಕ್ಕೆ 25 ಸಾವಿರಕ್ಕೂ ಅಧಿಕ ಜನರಿಂದ ಬೃಹತ್ ಪ್ರತಿಭಟನೆಯ ಮೂಲಕ 3ನೇ ಮನವಿ ಕೊಡಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ಮುಂದೆ ಉಗ್ರ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಸಿದರು.
ಮನಸೂರಿನ ರೇವಣಸಿದ್ದೇಶ್ವರ ಮಠದ ಶ್ರೀಬಸವರಾಜ ದೇವರು ಮಾತನಾಡಿದರು. ಬಳಿಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪ್ತ ಕಾರ್ಯದರ್ಶಿಯ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಜಾಲಿಕಟ್ಟಿಯ ಕೃಷ್ಣಾನಂದ ಶ್ರೀ, ಬೆಂಗಳೂರಿನ ಜಯಸತ್ಯವರ್ಧನ ಶ್ರೀ, ಬಾದಾಮಿಯ ಶಿವಶಂಕರ ಶ್ರೀ, ನಾಗೇಂದ್ರ ಶ್ರೀ, ಸಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಅನಿಲಕುಮಾರ ಪಾಟೀಲ, ಹೋರಾಟಗಾರರಾದ ಅನೇಕಲ್ಲ ದೊಡ್ಡಯ್ಯ, ಅಡಿವೆಪ್ಪ ಶಿವಳ್ಳಿ, ತಾರಾದೇವಿ ವಾಲಿ, ರುದ್ರಣ್ಣ ಗುಳಗುಳಿ, ಚಂದ್ರಶೇಖರ ಜುಟ್ಟಲ, ಗುರು ರಾಯನಗೌಡ್ರ, ಮಲ್ಲಿಕಾರ್ಜುನ ತಾಲೂರ, ಶಿವಾನಂದ ಪೂಜಾರ, ಯಲ್ಲಪ್ಪ, ಶಂಕ್ರಣ್ಣ ಸೇರಿದಂತೆ ಹಲವರಿದ್ದರು.