ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹ

KannadaprabhaNewsNetwork |  
Published : May 21, 2026, 03:00 AM IST
ಹುಕ್ಕೇರಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ನನೆಗುದಿಗೆ ಬಿದ್ದಿರುವ ಹಾಗೂ ಹೊಸ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ, ವಿವಿಧ ಸಂಘಟನೆಗಳು ಹಾಗೂ ರೈತರು ಪಟ್ಟಣದಲ್ಲಿ ಬುಧವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ನನೆಗುದಿಗೆ ಬಿದ್ದಿರುವ ಹಾಗೂ ಹೊಸ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ, ವಿವಿಧ ಸಂಘಟನೆಗಳು ಹಾಗೂ ರೈತರು ಪಟ್ಟಣದಲ್ಲಿ ಬುಧವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.

ಇಲ್ಲಿನ ಕೋರ್ಟ್ ಸರ್ಕಲ್ ಬಳಿ ತಾಲೂಕಿನ ವಿವಿಧ ಭಾಗಗಳಿಂದ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಹುಕ್ಕೇರಿ ತಾಲೂಕಿನಲ್ಲಿಯೇ ಎರಡು ಜಲಾಶಯ, ಮೂರು ನದಿಗಳು ಹರಿದಿದ್ದರೂ ಇಲ್ಲಿನ ಬಹುತೇಕ ಪ್ರದೇಶದ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಡಕಲ್ ಜಲಾಶಯದಿಂದ ವಿಜಯಪುರ, ಬಾಗಲಕೋಟೆವರೆಗೂ ನೀರು ಪೂರೈಕೆಯಾಗುತ್ತಿದೆ. ಆದರೆ, ತಾಲೂಕಿನ ಕೆಲ ಭಾಗದ ರೈತರ ಜಮೀನುಗಳಿಗೆ ಜಲಾಶಯದ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಈ ಭಾಗದ ಚುನಾಯಿತ ಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಜೊತೆಗೆ ಈ ಸಮಸ್ಯೆ ಪರಿಹರಿಸಬೇಕಾದ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕೊಟಬಾಗಿ, ದಡ್ಡಿ, ಕೋಚರಿ, ಕುರಣಿ ಸೇರಿದಂತೆ ತಾಲೂಕಿನ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಯೋಜನೆಯ ಕೊನೆ ಹಂತದವರೆಗೂ ನೀರು ತಲುಪುವಂತೆ ಕ್ರಮ ವಹಿಸಬೇಕು. ಘಟಪ್ರಭಾ ಬಲದಂತೆ ಮತ್ತು ಎಡದಂತೆ ಕಾಲುವೆಗಳನ್ನು ದುರಸ್ತಿಗೊಳಿಸಬೇಕು. ಹೊಸ ಯೋಜನೆಗಳಾದ ಅಡವಿಸಿದ್ದೇಶ್ವರ, ಶಂಕರಲಿಂಗ ಏತ ನೀರಾವರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತಾಲೂಕಿನ ಅಮ್ಮಣಗಿ, ಕಣಗಲಾ ಸೇರಿ 60 ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನಿಗದಿತ ಕಾಲಮಿತಿಯಲ್ಲಿ ಕೆರೆ ತುಂಬಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಮಲ್ಲಿಕಾರ್ಜುನ ಏತ ನೀರಾವರಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ಮೂಲಕ ಭಾಗದ ಜನರಿಗೆ ರಾಜ್ಯದ ನೀರಾವರಿ ಸಚಿವರು ಅನ್ಯಾಯ ಮಾಡುತ್ತಿದ್ದಾರೆ. ಜಲಾಶಯ ನಿರ್ಮಾಣಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಜನರ ಸಂಕಷ್ಟಕ್ಕೆ ಮೊದಲು ಸ್ಪಂದಿಸಬೇಕು. ಇಲ್ಲವಾದರೆ ಧಾರವಾಡಕ್ಕೆ ನೀರು ತೆಗೆದುಕೊಂಡು ಹೋಗಲು ಹಾಕಿರುವ ಪೈಪ್‌ಲೈನ್‌ಗಳನ್ನು ಕಿತ್ತು ಹಾಕಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಸತ್ಯಾಗ್ರಹ ನೇತೃತ್ವ ವಹಿಸಿದ್ದ ಸಂಘಟನೆ ಕಾರ್ಯಾಧ್ಯಕ್ಷ ಶಶಿಕಾಂತ ಗುರೂಜಿ, ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ ಮಾತನಾಡಿ, ಧರ್ಮಾತೀತ, ಪಕ್ಷಾತೀತ ರೈತರ ಹೋರಾಟ ಇದಾಗಿದ್ದು, ಪ್ರತಿಭಟನೆ ಬೆಂಬಲಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ, ರಾಜಕೀಯ ಹೊರತುಪಡಿಸಿ ನೀರಾವರಿಗಾಗಿ ಮಾತ್ರ ಪಾಲ್ಗೊಳ್ಳಬೇಕು. ಹುಕ್ಕೇರಿ ತಾಲೂಕಿನ ಜನ ತಮ್ಮ ಭೂಮಿ ಕಳೆದುಕೊಂಡು ಹಿಡಕಲ್ ಡ್ಯಾಂ ನಿರ್ಮಿಸಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಅವರಿಗೆ ಕುಡಿಯಲು ನೀರು ಸಿಗುತ್ತಿಲ್ಲವೆಂಬುದೇ ವಿಪರ್ಯಾಸ ಎಂದರು.

ಹುಣಶಿಕೊಳ್ಳಮಠದ ಸಿದ್ಧಬಸವ ದೇವರು, ಮಾಜಿ ಸಂಸದ ರಮೇಶ ಕತ್ತಿ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜೀತ ಮುನ್ನೋಳಿ, ಹಿರಣ್ಯಕೇಶಿ ಸಕ್ಕರೆ ಕಾರಖಾನೆ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಮುಖಂಡರಾದ ಸತ್ಯಪ್ಪಾ ಮಲ್ಲಾಪೂರೆ, ದುಂಡನಗೌಡ ಪಾಟೀಲ, ಸಂಜು ಹಾವಣ್ಣವರ, ಸುರೇಶ ಘಸ್ತಿ, ಸತ್ತೆಪ್ಪಾ ನಾಯಿಕ, ರಾಮಚಂದ್ರ ಜೋಶಿ, ಬಸವರಾಜ ಹುಂದ್ರಿ, ರಾಜು ಮುನ್ನೋಳಿ, ಭೀಮಸೇನ ಬಾಗಿ, ಶ್ರೀಶೈಲ ಯಮಕನಮರಡಿ, ಶ್ರೀಶೈಲ ಮಠಪತಿ, ಭೀಮಗೌಡ ಗಿರಿಗೌಡನವರ, ಬಸವರಾಜ ತಳವಾರ, ಲಾಜಮ್ ನಾಯಿಕವಾಡಿ, ಪ್ರಮೋದ ಕೂಗೆ, ಪ್ರದೀಪ ರಿಜಕನವರ, ರವಿ ಚಿಕ್ಕೋಡಿ, ನಾಗರಾಜ ದೇಸಾಯಿ, ಪ್ರೇಮ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.

ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳ ತಂಡ ಧರಣಿನಿರತ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದರು. ದಿನವೀಡಿ ನಡೆದ ಧರಣಿ ಸತ್ಯಾಗ್ರಹದಿಂದ ಜನ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಯಿತು.

ಪೊಲೀಸ್ ಇಲಾಖೆ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪಟ್ಟಣ ವ್ಯಾಪ್ತಿಯ ಮದ್ಯದಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.

-------

ಕೋಟ್‌

ಪ್ರಸ್ತುತ ಏತ ನೀರಾವರಿಗಳ ಸಮರ್ಪಕ ಬಳಕೆ, ನದಿ ಮತ್ತು ಕೆರೆಗಳ ಹೂಳು ಎತ್ತುವಿಕೆಗೆ ಆದ್ಯತೆ ನೀಡಬೇಕು. ಈಗಾಗಲೇ 41 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆದಿದೆ. 5 ಬ್ಯಾರೇಜುಗಳಿಗೆ ನೀರು ತುಂಬುವುದರಿಂದ ಹಿರಣ್ಯಕೇಶಿ ನದಿಯಲ್ಲಿ ವರ್ಷವಿಡಿ ನೀರು ಸಂಗ್ರಹವಿರಲಿದೆ. ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೊಂಡಲ್ಲಿ ಹುಕ್ಕೇರಿ ಮತಕ್ಷೇತ್ರದ 25 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಇದರಿಂದ ಹುಕ್ಕೇರಿ ಮತಕ್ಷೇತ್ರ ಸಂಪೂರ್ಣ ನೀರಾವರಿಗೊಳಪಡಲಿದೆ. ರೈತಪರ ಹೋರಾಟಕ್ಕೆ ಕತ್ತಿ ಕುಟುಂಬ ಹಾಗೂ ತಾಲೂಕಿನ ಜನರ ಪೂರ್ಣ ಬೆಂಬಲವಿದೆ. ಸರ್ಕಾರ ಎಚ್ಚೆತ್ತು ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು.

ರಮೇಶ ಕತ್ತಿ, ಮಾಜಿ ಸಂಸದ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಇಒ ಭೇಟಿ
ಮೆಡಿಕಲ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ