ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎಲ್ಲ ವಿಭಾಗದ ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ, ತೃತೀಯ ಸೆಮಿಸ್ಟರ್ ಫಲಿತಾಂಶ ಬಿಡುಗಡೆಗಾಗಿ ಹಾಗೂ ಮುದ್ರಿತ ಅಂಕಪಟ್ಟಿ ಸೇರಿದಂತೆ ವಿದ್ಯಾರ್ಥಿಗಳ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕುಲಸಚಿವ ಸಿ.ಟಿ. ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಕಜಾವಿವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಅಂಕಪಟ್ಟಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹಾರಕ್ಕೆ ಜಾವಿವಿ ಆಡಳಿತ ಮಂಡಳಿ ಸೂಕ್ತ ಕ್ರಮಕೈಗೊಳಲು ಮುಂದಾಗಬೇಕು. ಯಾವುದೇ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಯುಸಿಸಿಎಂಸ್ ತಾಂತ್ರಿಕ ಸಮಸ್ಯೆ ರಾಜ್ಯಾದ್ಯಂತ ಎಲ್ಲ ವಿದ್ಯಾರ್ಥಿಗಳಿಗೆ ಮುಳುವಾಗಿದೆ. ಸರ್ಕಾರಗಳು ಎಚ್ಚೆತ್ತುಕೊಂಡು ಕೂಡಲೇ ವಿದ್ಯಾರ್ಥಿ ವಿರೋಧಿ ಈ ತಾಂತ್ರಿಕ ಪೋರ್ಟಲ್ ಅನ್ನು ರದ್ದು ಪಡಿಸಬೇಕು ಎಂದರು.
ಈ ಕುರಿತು ವಿದ್ಯಾರ್ಥಿಗಳು ನಿರಂತರವಾಗಿ ಮನವಿ ಪತ್ರ ನೀಡಿದರೂ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಎರಡು ವರ್ಷಕ್ಕೆ ಮುಗಿಯಬೇಕಾದ ಸ್ನಾತಕೋತ್ತರ ಪದವಿ ಮೂರು ವರ್ಷಗಳ ಕಳೆದರೂ ಮುಗಿಯುತ್ತಿಲ್ಲ. ಮುಂದಿನ ಉನ್ನತ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ. ಈಗಾಗಲೇ ಪರೀಕ್ಷೆ ಬರೆದ ಪ್ರಥಮ, ದ್ವಿತೀಯ, ತೃತೀಯ ಸೆಮಿಸ್ಟರ್ ಫಲಿತಾಂಶ ಬಿಟ್ಟರೆ ಮಾತ್ರ ಮುಂದಿನ ಸೆಮಿಸ್ಟರ್ ಪರೀಕ್ಷೆ ಹಾಜರಾಗುತ್ತೇವೆ. ಇಲ್ಲವಾದರೆ ಪರೀಕ್ಷೆಯನ್ನು ಬಹಿಷ್ಕರಿಸುತ್ತೇವೆ. ಜ. 27ರೊಳಗೆ ಫಲಿತಾಂಶ ಬಿಡುಗಡೆ ಮಾಡದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಅರುಣ್ ಪಾಂಡೆ, ಕಾರ್ಯದರ್ಶಿ ಸೌಭಾಗ್ಯ ಕೋಳಿವಾಡ, ಕಾವ್ಯಾ ಎಂ. ಕೆ., ಪ್ರತಿಭಾ ಪಿ.ಬಿ., ಬಸವರಾಜ ಬಡಿಗೇರ, ಚನ್ನಪ್ಪ, ಸಹ ಕಾರ್ಯದರ್ಶಿ ಗೀತಾ ಕೆ., ಶಿಲ್ಪಾ ಎಸ್., ವಿನೋದಕುಮಾರ್ ಡಿ., ಉಮೇಶ್ ಟಿ., ಪ್ರಶಾಂತ, ಸಂಜಯ್ ಇತರರು ಇದ್ದರು.