ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಾನಾ ವಸತಿ ಶಾಲೆಯಲ್ಲಿ ಹೊರಗುತ್ತಿಗೆ ನೌಕರರು ವೇತನ ಪರಿಷ್ಕರಣೆ ಇಲ್ಲದೆ ಹಾಗೂ ಕಾಯಂಮಾತಿ ಇಲ್ಲದೆ ದುಡಿಯುತ್ತಿದ್ದು ಅವರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಜರುಗಿತು.
ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಪರಿಷ್ಕರಣೆ ಕರಡು ಅಂತಿಮ ಅಧಿಸೂಚನೆ ಹೊರಡಿಸಿರುವ ಕನಿಷ್ಠ ವೇತನ ವಿಳಂಬ ಮಾಡದೆ ತಕ್ಷಣ ಜಾರಿ ಮಾಡಬೇಕು. ಪರಿಷ್ಕರಣೆ ಮಾಡಿರುವ ಕನಿಷ್ಠ ವೇತನ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ತಿಂಗಳಿಗೆ ಕನಿಷ್ಠ ವೇತನ ಮಾಸಿಕ ₹೩೬ ಸಾವಿರ ಕೊಡಬೇಕು. ಎಲ್ಲ ಹಾಸ್ಟೆಲ್ ಮತ್ತು ವಸತಿ ನಿಲಯ ಹೊರಗುತ್ತಿಗೆ ಸಿಬ್ಬಂದಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲೇ ಕಾಯಂ ನೇಮಕ ಮಾಡಬೇಕು. ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು ಹಾಗೂ ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐಡಿಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ಹಣ ತುಂಬಿದ ರಶೀದಿ ಕೊಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯ ಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ಯಾನೇಶ ಕಡಗದ, ಮಹ್ಮದ ರಫೀಕ, ಫಕೀರಪ್ಪ, ದಾವಲಸಾಬ್, ನೂರ ಪಾಷಾ, ಮಂಜುನಾಥ, ಪಾರ್ವತಿ, ಶೇಖರ, ಶಾಂತಮ್ಮ, ಹನುಮಂತ, ರಮೇಶ, ಆನಂದ, ರೇಖಾ ಇತರರಿದ್ದರು.