ತೋಟದ ಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ನೀಡಲುವಂತೆ ಒತ್ತಾಯ

KannadaprabhaNewsNetwork | Published : Jan 21, 2025 12:33 AM

ಸಾರಾಂಶ

ತೋಟದ ಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪಟ್ಟಣದ ಸಹಾಯಕ ಕಾರ್ಯಪಾಲಕ ಅಭಿಯಂತರರ ಮೂಲಕ ಕೊಪ್ಪಳ ಜೆಸ್ಕಾಂ ಉಪವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತೋಟದ ಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪಟ್ಟಣದ ಸಹಾಯಕ ಕಾರ್ಯಪಾಲಕ ಅಭಿಯಂತರರ ಮೂಲಕ ಕೊಪ್ಪಳ ಜೆಸ್ಕಾಂ ಉಪವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ನಜೀರಸಾಬ ಮೂಲಿಮನಿ ಮಾತನಾಡಿ, ಕುಷ್ಟಗಿ ತಾಲೂಕನ್ನು ಆಯ್ಕೆ ಮಾಡಿ ನಿರಂತರ ಜ್ಯೋತಿ ಹೆಸರಿನಲ್ಲಿ ರಾತ್ರಿ ವೇಳೆ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಸಿಂಗಲ್ ಫೇಸ್ ವಿದ್ಯುತ್‌ನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ 2010-11ನೇ ಸಾಲಿನಲ್ಲಿ ಹನುಮಸಾಗರ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಸತತ 9 ದಿನಗಳ ಕಾಲ ವಿವಿಧ ರೀತಿಯ ಹೋರಾಟ ಮಾಡಿ ಮರುಜಾರಿಯಾಗುವಂತೆ ಮಾಡಲಾಗಿತ್ತು. ಮೂರು ವರ್ಷದ ನಂತರ ಮತ್ತೆ ಸಿಂಗಲ್ ಫೇಸ್ ವಿದ್ಯುತ್‌ನ್ನು ಕಡಿತಗೊಳಿಸಿದ ಸರ್ಕಾರದ ವಿರುದ್ಧ ಅನೇಕ ರೀತಿಯ ಹೋರಾಟ ಮಾಡಿ ಅಲ್ಲಿಂದ ಇಲ್ಲಿಯವರೆಗಿನ ಮುಖ್ಯಮಂತ್ರಿ, ಇಂಧನ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಆಗ್ರಹಿಸುತ್ತಲೇ ಬರಲಾಗಿತ್ತು ಎಂದರು.

ರೈತ ಸಂಘದ ಹೋರಾಟದ ಪ್ರತಿಫಲವಾಗಿ ಕರ್ನಾಟಕ ಸರ್ಕಾರ ಜ.3. 2025ರಂದು ಜೆಸ್ಕಾಂನ ಕಲಬುರಗಿಯ ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ ವಿಭಾಗದ ಎಲ್ಲಾ ಕಾರ್ಯಪಾಲಕ ಅಭಿಯಂತರರಿಗೆ ಅತ್ಯಂತ ಜರೂರು ಆದೇಶವೆಂದು ಪರಿಗಣಿಸಿ ರೈತರ ತೋಟದ ಮನೆಗಳಿಗೆ ಐಪಿ ಸೆಟ್ ಫೀಡರ್‌ಗಳಿಗೆ ರೋಸ್ಟರ್ ಜಿ.ಓ.ಎಸ್. ಅಳವಡಿಸುವ ಹಾಗೂ ಸಾಧ್ಯವಾದಲ್ಲಿ ಸಮೀಪದಲ್ಲಿರುವ ನಿರಂತರ ಜ್ಯೋತಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜು ಮಾಡಿ ಓಪನ್ ಡೆಲ್ಟಾ ಸಿಸ್ಟಂ ಮೂಲಕ ಸಿಂಗಲ್ ವಿದ್ಯುಚ್ಛಕ್ತಿ ಸರಬರಾಜು ಮಾಡುವಂತೆ ಸೂಚನೆ ಕೊಟ್ಟು 15 ದಿನಗಳು ಕಳೆದರೂ ಇನ್ನೂವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ಫೇ.17ರಂದು ಜಿಲ್ಲೆಯ ಎಲ್ಲಾ ಜೆಸ್ಕಾಂ ಕಚೇರಿ ಬಂದ್ ಮಾಡುವುದರ ಮೂಲಕ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ರೈತರಾದ ಶಶಿಧರ ಹಿರೇಮಠ, ಮಕ್ತುಮಸಾಬ ಸುಳೇಕಲ್, ದೊಡ್ಡಪ್ಪ ಸಜ್ಜಲಗುಡ್ಡ, ಮಹಾಂತಮ್ಮ ಪಾಟೀಲ್, ವಿನೋದ ಕವಡಿಕಾಯಿ ಸೇರಿದಂತೆ ಅನೇಕರು ಇದ್ದರು.

Share this article