ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಜಾರಿಗೊಳಿಸಲು ಕೂಡಲೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು. ಇಲ್ಲವೇ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿ ಮಾಡಬೇಕು ಎಂದು ಸಾಹಿತಿಗಳು, ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದಾರೆ.ಬುಧವಾರ ಮೈಸೂರಿನ ಕನ್ನಡ ಕ್ರಿಯಾ ಸಮಿತಿ, ಬೆಂಗಳೂರಿನ ಕರ್ನಾಟಕ ವಿಕಾಸರಂಗ ಹಾಗೂ ಕನ್ನಡ ಗೆಳೆಯರ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಮಾತನಾಡಿ, ಮಸೂದೆ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಿದಾಗ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯ. ಶೇ.100ರಷ್ಟು ಅಲ್ಲದಿದ್ದರೂ ಶೇ.75ರಷ್ಟು ಕನ್ನಡಿಗರಿಗೆ ಖಾಸಗಿ ಉದ್ದಿಮೆಯಲ್ಲಿ ಮೀಸಲಾತಿ ಕೊಡಬೇಕು. ರಾಜ್ಯ ಸರ್ಕಾರ ಬಂಡವಾಳಶಾಹಿಗಳು, ಕನ್ನಡ ವಿರೋಧಿಗಳ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು.ಸಾಹಿತಿ ಹಂ.ಪ.ನಾಗರಾಜಯ್ಯ ಮಾತನಾಡಿ, ಮಸೂದೆಯನ್ನು ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ವಿಷಾದನೀಯ. ಅನ್ಯರಾಜ್ಯದ ಅನ್ಯ ಭಾಷಿಕರಿಗೆ ಉದ್ಯೋಗ ನೀಡಬೇಡಿ ಎನ್ನುವುದು ನಮ್ಮ ಹೋರಾಟದ ಆಶಯವಲ್ಲ. ಮಸೂದೆಯಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಿದ 15 ವರ್ಷಗಳಿಗಿಂತ ಹೆಚ್ಚು ಕಾಲದಿಂದ ನೆಲೆಸಿರುವ, ಕನ್ನಡ ಓದಲು, ಬರೆಯಲು ಬಲ್ಲ ವ್ಯಕ್ತಿ ಕನ್ನಡಿಗ ಎಂದು ವಿಶ್ಲೇಷಿಸಲಾಗಿದೆ. ಈ ಮಸೂದೆ ಜಾರಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ನಮ್ಮ ನಾಡು, ನುಡಿಯ ಅಸ್ಮಿತೆ ಉಳಿಸುವ ಹೋರಾಟ ಇದಾಗಿದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ಕನ್ನಡಿಗರಿಗೆ ಅನುಕೂಲವಾಗುವ ಮಸೂದೆಯನ್ನು ಉದ್ಯಮಿ ಮೋಹನದಾಸ್ ಪೈ ಅಂತಹವರು ವಿರೋಧಿಸುವುದು ಖಂಡನೀಯ. ಈ ವಿಚಾರ ಭಾವನಾತ್ಮಕ ವಿಷಯ ಆಗಿರದೆ, ಕಾನೂನಾತ್ಮಕ ವಿಷಯ ಆಗಬೇಕು. ಸಂವಿಧಾನಾತ್ಮಕವಾಗಿ ಭಾಷಾ ರಾಜ್ಯಗಳನ್ನು ರಚಿಸಿದ ಮೇಲೆ, ಅದಕ್ಕೆ ಸಲ್ಲಬೇಕಾದ ಸವಲತ್ತುಗಳನ್ನು ಒದಗಿಸಬೇಕು. ಕನ್ನಡಿಗರಿಗೆ ಕೌಶಲ್ಯವೇ ಇಲ್ಲ ಎಂಬಂತಹ ಹೇಳಿಕೆಗಳನ್ನು ಕೊಡುವ ಮೊದಲು ಇಲ್ಲಿನ ಪ್ರತಿಭೆಗಳಿಗೆ ಉದ್ಯೋಗ ಕೊಟ್ಟು ನೋಡಬೇಕು ಎಂದು ಹೇಳಿದರು.ಮೈಸೂರಿನ ಕನ್ನಡ ಕ್ರಿಯಾ ಸಮಿತಿಯ ಸ.ರ.ಸುದರ್ಶನ್ ಮಾತನಾಡಿ, ವಿದೇಶಕ್ಕೆ ಕಲಿಯಲು ಅಥವಾ ಉದ್ಯೋಗಕ್ಕಾಗಿ ಭಾರತದಿಂದ ಹೋಗುವವರು ಇಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಗೇಟ್, ಟಾಫಿಲ್ ಎಂಬಂತಹ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಒಪ್ಪಿಕೊಳ್ಳುವ ಭಾರತೀಯ ಬುದ್ಧಿಜೀವಿಗಳು, ಉದ್ಯಮಿಗಳು ಕನ್ನಡ ಪರೀಕ್ಷೆಯನ್ನು ನಿರಾಕರಿಸುವುದು ಗುಲಾಮೀಯ ಮನೋಭಾವ ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಯಾವುದೇ ಒಂದು ಪ್ರದೇಶದಲ್ಲಿ ಉದ್ಯಮಗಳ ಸ್ಥಾಪನೆಯ ಉದ್ದೇಶ ಆ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಸ್ಥಳೀಯರ ಉದ್ಯೋಗಾವಕಾಶಗಳ ಹೆಚ್ಚಳದ ಉದ್ದೇಶವನ್ನು ಹೊಂದಿರುತ್ತದೆ. ಆ ಉದ್ದೇಶಕ್ಕಾಗಿ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ.ಉದ್ಯಮಿಗಳು ಅಪಸ್ವರ ಎತ್ತಿದರೆ ಅವರೊಂದಿಗೆ ಮಾತುಕತೆ ನಡೆಸಿ ಮಸೂದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ವಿಕಾಸರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಖರ್, ಡಾ। ಅಶ್ವಥನಾರಾಯಣ ಇದ್ದರು.