ಶ್ರೀ ಆಂಜನೇಯ ಕಾಟನ್ ಮಿಲಿ ಕಾರ್ಮಿಕ ಕಾಲೋನಿಯಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷದ (ಸಿಪಿಐ) ಕಚೇರಿಗೆ ಮೀಸಲಿಟ್ಟಿದ್ದ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿದ್ದೇವೆ ಎಂದು ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆವರಗೆರೆ ವಾಸು ತಿಳಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರೀ ಆಂಜನೇಯ ಕಾಟನ್ ಮಿಲಿ ಕಾರ್ಮಿಕ ಕಾಲೋನಿಯಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷದ (ಸಿಪಿಐ) ಕಚೇರಿಗೆ ಮೀಸಲಿಟ್ಟಿದ್ದ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯಿಸಿದ್ದೇವೆ ಎಂದು ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆವರಗೆರೆ ವಾಸು ತಿಳಿಸಿದರು.ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಆಂಜನೇಯ ಕಾಟನ್ ಮಿಲ್ ಕಾರ್ಮಿಕ ಕಾಲೋನಿಯಲ್ಲಿ ಕಚೇರಿಗಾಗಿ ಮೀಸಲಿಟ್ಟಿದ್ದ ಸೈಟ್ ನಂ.46ರ 20-30 ಅಡಿ ಅಳತೆ, ಡೋ.ನಂ.322/3-46 ಜಾಗವು ಮೂಲತಃ ಸಿಪಿಐನ ತಾಲೂಕು ಸಮಿತಿ ಹೆಸರಿನಲ್ಲಿದ್ದುದನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದರು.
ಮಾರಾಟ ಮಾಡಿದ ಜಾಗವನ್ನು ಸಿಪಿಐ ಜಿಲ್ಲಾ ಮಂಡಳಿ ಹೆಸರಿಗೆ ವರ್ಗಾವಣೆ ಮಾಡಿ, 2024ರ ಅ.31ರಂದು ಅಂಜನಾ ಆರ್. ಎಂಬುವರಿಗೆ 3.91 ಲಕ್ಷ ರು.ಗೆ ಮಾರಾಟ ಮಾಡಿರುವುದಾಗಿ ದಾಖಲೆ ಇದ್ದು, ಇದು ಸಬ್ ರಿಜಿಸ್ಟರ್ ನಿರ್ಧರಿತ ದರವಾಗಿದೆ. ಆದರೆ, ವಾಸ್ತವದಲ್ಲಿ 14 ಲಕ್ಷ ರು.ಗೂ ಅದಿಕ ಹಣಕ್ಕೆ ನಿವೇಶನ ಮಾರಿಕೊಂಡಿದ್ದಾರೆಂಬ ಶಂಕೆ ನಮಗಿದೆ ಎಂದು ದೂರಿದರು.ಜಿಲ್ಲೆಯಲ್ಲಿ ಸಿಪಿಐನ ಸುಮಾರು 41 ಕೋಟಿ ರು.ಗೂ ಅದಿಕ ಮೌಲ್ಯದ ಆಸ್ತಿ ಇದೆ. ಇಲ್ಲಿನ ಡಾಂಗೇ ಪಾರ್ಕ್ ಎದುರಿನ ನಿವೇಶನ, ಭಗತ್ ಸಿಂಗ್ ನಗರದ ಮೂಲೆಯಲ್ಲಿ 13 ಮಳಿಗೆಗಳ ಸಂಕೀರ್ಣ, ಬೇತೂರು ರಸ್ತೆಯ 9 ಮಳಿಗೆಗಳು ಅಶೋಕ ರಸ್ತೆಯ ಸಿಪಿಐ ಕಚೇರಿ ಕಟ್ಟಡ, ಕೆಳಗೆ ಮತ್ತು ಪಕ್ಕ ಬಾಡಿಗೆ 5 ಮಳಿಗೆಗಳು, ಕುಂದುವಾಡ ಗ್ರಾಮದ ಕಚೇರಿ ಜಾಗ, ಹರಿಹರದ ಕಚೇರಿ ಜಾಗವಿದ್ದು, 2 ಮನೆ ಬಾಡಿಗೆ, ಆವರಗೆರೆ ಗ್ರಾಮದಲ್ಲಿ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಎರಡು ನಿವೇಶನ, ಅಡಿವೆಪ್ಪ ಸಮುದಾಯ ಭವನ ಸೇರಿದಂತೆ ಬಹುಕೋಟಿ ಮೌಲ್ಯದ ಆಸ್ತಿ ಸಿಪಿಐ ಹೊಂದಿದೆ ಎಂದು ತಿಳಿಸಿದರು.
ಅಂಜನಾ ಆರ್. ಎಂಬುವರಿಗೆ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಪಿ.ಬಿ.ಚಂದ್ರು ಶುದ್ಧಕ್ರಯಕ್ಕೆ ಬರೆದು ಕೊಟ್ಟಿದ್ದಾರೆ. ಪತ್ರದಲ್ಲಿ 3,91,000 ರು.ಗೆ ಮಾರಾಟ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಕ್ರಯಪತ್ರಕ್ಕೆ ಸಾಕ್ಷಿದಾರರಾಗಿ ಎಚ್.ಜಿ.ಉಮೇಶ ಆವರಗೆರೆ, ಯಲ್ಲಪ್ಪ ಸಹ ಸಹಿ ಹಾಕಿದ್ದಾರೆ. ಈ ನಿವೇಶನ ಮಾರಾಟ ಮಾಡಲು ರಾಜ್ಯ ಸಮಿತಿ ಸದಸ್ಯರಾದ ಸಾತಿ ಸುಂದರೇಶ, ವಿಜಯ ಭಾಸ್ಕರ್ ಸಾಥ್ ನೀಡಿದ್ದಾರೆ. ಮಾರಾಟದಿಂದ ಬಂದ ಹಣವನ್ನು ರಾಜ್ಯ ಸಮಿತಿಯ ಸಾತಿ ಸುಂದರೇಶ, ವಿಜಯ ಭಾಸ್ಕರ್‌ರಿಗೂ ಕೊಟ್ಟಿದ್ದಾರೆಂದು ಹೇಳಿಕೊಳ್ಳುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಬೆವರು ಸುರಿಸಿ, ದುಡಿದ ಸಿಪಿಐ ಆಸ್ತಿಗಳನ್ನು ಉಳಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು.ಕಾಮ್ರೆಡ್ ಸುರೇಶ, ಶೇಖರಪ್ಪ, ಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್.ನಾಗರಾಜ, ಎನ್.ಟಿ.ತಿಪ್ಪೇಸ್ವಾಮಿ, ಎನ್.ಎಚ್.ರಾಮಪ್ಪ, ವಿಶಾಲಾಕ್ಷಿ, ಎಂ.ಬಿ.ಶಾರದಮ್ಮ, ಶಿವಶರಣಪ್ಪ, ಬಿ.ಓ.ವೀರಣ್ಣ, ಬಸವರಾಜಪ್ಪ, ಕೆ.ಜಿ.ವೆಂಕಟೇಶ, ಮಹಮ್ಮದ್ ಬಾಷಾ, ರಫೀಕ್ ಇತರರು ಇದ್ದರು.