ಧಾರವಾಡ: ನೀಟ್ ಪರೀಕ್ಷೆ ''''''''''''''''ಪ್ರಶ್ನೆಪತ್ರಿಕೆ ಸೋರಿಕೆ'''''''''''''''' ಖಂಡಿಸಿ ಹಗರಣದಲ್ಲಿ ಭಾಗಿ ಆಗಿರುವವರಿಗೆ ಕಠಿಣ ಶಿಕ್ಷೆ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಎಸ್ಎಫ್ಐ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮೂಲಕ ರಾಷ್ಟ್ರಪತಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಜಸ್ಥಾನ ಸೇರಿದಂತೆ ವಿವಿಧೆಡೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ನಡೆದ ಆರೋಪಗಳಿದ್ದು, ಯಾರೋ ಮಾಡಿದ ತಪ್ಪಿಗೆ ಇಡೀ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯ ಆಧಾರಿತ ಪ್ರವೇಶ ಪರೀಕ್ಷೆ ಪದ್ಧತಿ ಬದಲಾಯಿಸಲು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಈಗ ನೀಟ್-ಯುಜಿಗೆ ಸಂಬಂಧಿಸಿದಂತೆಯೂ ಇದೇ ಆರೋಪ ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಕೂಡಲೇ ಭಾಗಿಯಾದವರ ಪಾತ್ರದ ಬಗ್ಗೆ ಪಾರದರ್ಶಕ ಮತ್ತು ತನಿಖೆಗೆ ಈ ಪ್ರಕರಣವನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಮಿತಿ ರಚಿಸಿ ತನಿಖೆ ಮಾಡಬೇಕು. ಎನ್‌ಟಿಎ ರದ್ದುಪಡಿಸಬೇಕು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆಯನ್ನು ಕೇಂದ್ರ ಶಿಕ್ಷಣ ಸಚಿವರು ಹೊತ್ತುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಾಗರಾಜ್ ಛಲವಾದಿ, ಅರುಣ್ ನಗವತ್, ಕೃಷ್ಣ ನಾಯ್ಕ, ಮಮತ ಕೊಡದ, ಮಮತ ಮುಂಡರಗಿ, ಮಲ್ಲಿಕಾರ್ಜುನ ಪರಮ್ಮನವರ, ವಿಜಯ್ ಗೋಪಾಲಿ ಆಗ್ರಹಿಸಿದರು.