ಶಿಕಾರಿಪುರ: ಹೆಣ್ಣು ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗಾಗಿ ಲೈಂಗಿಕ ಕಿರುಕುಳ, ದೌರ್ಜನ್ಯ, ಅತ್ಯಾಚಾರದ ಆರೋಪಿಗಳಿಗೆ ಜಾಮೀನು ನೀಡದೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಇಲ್ಲಿನ ಸ್ತ್ರೀಬಂಧು ಸ್ವ.ಸಹಾಯ ಸಂಘಗಳ ಒಕ್ಕೂಟಗಳು ಮತ್ತು ವಿವಿಧ ಗ್ರಾಪಂ ವ್ಯಾಪ್ತಿಯ ಸ್ವ-ಸಹಾಯ ಸಂಘಗಳ ಒಕ್ಕೂಟಗಳ ವತಿಯಿಂದ ಗುರುವಾರ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಹಿಳೆಯರ ವಿರುದ್ದದ ಇಂತಹ ಅನಾಗರಿಕ ಪ್ರಕರಣ ಶಾಶ್ವತವಾಗಿ ಸ್ಥಗಿತಗೊಳ್ಳಲು ಅಪರಾಧಿಗಳಿಗೆ ಕಠಿಣ ಶಿಕ್ಷೆ, ಶಾಶ್ವತ ಜಾಮೀನು ನಿರಾಕರಣೆ, ಅಥವಾ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಿ ಮಹಿಳೆಯರು ಭಯಮುಕ್ತರಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು
ವಿವಿಧ ಗ್ರಾ.ಪಂ.ಒಕ್ಕೂಟಗಳ ಅಧ್ಯಕ್ಷರಾದ ರೇಖಾ, ಶ್ರುತಿ, ಮಮತಾ, ಮಧುಮತಿ, ಹಸೀನಾ ಭಾನು, ಶಹನಾಜಾ ಭಾನು ಸೇರಿದಂತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಜರಿದ್ದರು.