ಇಳಕಲ್ಲ : ನಗರದ ಜನತೆ ದಶಕಗಳ ಬೇಡಿಕೆಯಾಗಿರುವ ಆಲಮಟ್ಟಿ- ಚಿತ್ರದುರ್ಗ ವಾಯಾ ಇಳಕಲ್ಲಗೆ ಹೊಸ ರೈಲು ಮಾರ್ಗದ ಸರ್ವೇ ಕಾರ್ಯ ಶೀಘ್ರವಾಗಿ ಪ್ರಾರಂಭಿಸುವಂತೆ ನಗರದ ರೈಲ್ವೆ ಹೋರಾಟ ಸಮಿತಿ ಸರ್ವ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಜು.11ರಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಕುರಿತು ಜು.2ರಂದು ಯುವಕರು ಮುದುಕರಾದ್ರೂ ಬರಲಿಲ್ಲ ರೈಲು ಶೀರ್ಷಿಕೆಯಡಿ ಕನ್ನಡಪ್ರಭ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಪರಿಣಾಮ ರೈಲು ಮಾರ್ಗದ ಸರ್ವೇ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಸಂಸದರು, ಅಂದಾಜು ೨೮೦ ಕಿ.ಮೀ.ನ ಈ ನೂತನ ರೈಲ್ವೆ ಕಾಮಗಾರಿಗೆ ₹೮ ಸಾವಿರ ಕೋಟಿ ಅನುದಾನ ಬೇಕಾಗುತ್ತದೆ. ಈಗಾಗಲೇ ಎರಡು ರೀತಿ ಸರ್ವೇ ಕಾರ್ಯ ಮುಗಿದಿದೆ. ಆದರೆ ಈ ಕಾರ್ಯವು ದೊಡ್ಡ ಹಣಕಾಸು ಯೋಜನೆ ಆಗಿರುವುದ್ದರಿಂದ ಕೇಂದ್ರ ಹಣಕಾಸು ಇಲಾಖೆ ಅನುಮತಿ ಕಡ್ಡಾಯವಾಗಿ ಬೇಕು. ಹೀಗಾಗಿ ಕೆಲಸ ನಿಧಾನಗತಿಯಲ್ಲಿದೆ. ಇದಕ್ಕಾಗಿ ನನ್ನ ಜೊತೆಗೆ ವಿಜಯಪುರ, ಕೊಪ್ಪಳ, ವಿಜಯನಗರ ಹಾಗೂ ಚಿತ್ರದುರ್ಗ ಸಂಸದರನ್ನು ಕರೆದುಕೊಂಡು ರೈಲ್ವೆ ಮಂತ್ರಿಗಳನ್ನು ಹಾಗೂ ರೈಲ್ವೆ ಕಮಿಷನರ್‌ರನ್ನು ಭೇಟಿಯಾಗಿ ಮಂಜೂರಾತಿಗೆ ಒತ್ತಾಯಿಸುವೆ ಎಂದ ಸಂಸದರು, ಇಳಕಲ್ಲ ಗಜೇಂದ್ರಗಡ ಮಾರ್ಗದ ಮಂಜೂರಾತಿಗೂ ಒತ್ತಾಯಿಸಲು ತಾವುಗಳು ಈ 2 ಯೋಜನೆಗಳ ಮನವಿ ತೆಗೆದುಕೊಂಡು ಇದೇ ಜು.೨೧ರಂದು ನಡೆಯಲಿರುವ ಸಂಸತ್ತ ಅಧಿವೇಶನದಂದು ಆಗಮಿಸುವಂತೆ ತಿಳಿಸಿದರು.
ನಿಯೋಗದಲ್ಲಿ ಮಾಜಿ ಶಾಶಕ ದೊಡ್ಡನಗೌಡ ಪಾಟೀಲ, ಲಕ್ಷ್ಮಣ ಗುರಂ, ವೆಂಕಟೇಶ ಪೋತಾ, ಶರಣಪ್ಪ ಅಕ್ಕಿ, ಮಹಾಂತಗೌಡ ಪಾಟೀಲ, ಅಶೋಕ ಶ್ಯಾವಿ, ಬಸವರಾಜ ಮಠದ, ಶ್ರೀಕಾಂತ ಹೋಸಮನಿ, ರಾಜು ಕುಲಕರ್ಣಿ, ರಾಂಪೂರ ಗುರುಗಳು, ಚಂದ್ರಶೇಖರ ಎಕಬೋಟೆ, ಗೋವಿಂದ ಕರವಾ, ಮುತಣ್ಣ ಕರಡಿ, ಹಾಗು ಇತರರಿದ್ದರು.