ಕಂಪ್ಲಿ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.25ರಂದು ಬಾಣಂತಿ ಸಿ.ಚಂದ್ರಮ್ಮ ಹಾಗೂ ಮಗು ಸಾವಿಗೀಡಾದ ಪ್ರಕರಣಕ್ಕೆ ಕಾರಣರಾದ ಸ್ತ್ರೀರೋಗ ತಜ್ಞ ಡಾ.ರವೀಂದ್ರ ಕನಕೇರಿ ಹಾಗೂ ಶುಶ್ರೂಷಣಾಧಿಕಾರಿ ರಜನಿಯನ್ನು ತಕ್ಷಣವೇ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿ, ನಾನಾ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದ ತಾಯಿ-ಮಗುವಿನ ಸಾವು ಸಂಭವಿಸಿದೆ. ಸಂಬಂಧಪಟ್ಟ ಇಬ್ಬರ ವಿರುದ್ಧ ತಕ್ಷಣ ಎಫ್ ಐಆರ್ ದಾಖಲಿಸಿ ಕ್ರಿಮಿನಲ್ ಪ್ರಕರಣ ಹೂಡಬೇಕು. ಇಬ್ಬರನ್ನು ಅಮಾನತುಗೊಳಿಸಬೇಕು. ಮೃತರ ಕುಟುಂಬಕ್ಕೆ ಕನಿಷ್ಠ ₹20 ಲಕ್ಷ ಪರಿಹಾರ ನೀಡಬೇಕು. ಅಲ್ಲದೆ, ನಮ್ಮ ಬೇಡಿಕೆಗಳನ್ನು 15 ದಿನಗಳಲ್ಲಿ ಈಡೇರಿಸದಿದ್ದಲ್ಲಿ ಕಂಪ್ಲಿ ಬಂದ್ ಮಾಡಿ ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ವಿವಿಧ ಸಂಘಟನೆಗಳ ಮುಖಂಡರಾದ ಕೆ.ಶಂಕರ ನಂದಿಹಾಳ್, ಮೃತ ಬಾಣಂತಿಯ ಪತಿ ರಾಮಸಾಗರ ಸಿ.ವೀರೇಶ್, ಸಿ.ಎ.ಚನ್ನಪ್ಪ, ಎ.ಎಸ್.ಯಲ್ಲಪ್ಪ, ವಕೀಲ ಸೋಮಪ್ಪ ಚಲುವಾದಿ, ರಾಮಣ್ಣ, ದೊಡ್ಡಬಸವರಾಜ ಬಡಗಿ, ವಕೀಲ ರುದ್ರಪ್ಪ, ಸಿ.ಶಿವಕುಮಾರ್, ಹೊಳ್ಳೆಪ್ಪ, ಸಿ.ವಿರುಪಾಕ್ಷಿ, ರಾಘವೇಂದ್ರ, ಶಂಕರ್, ಎಸ್.ಚಂದ್ರಶೇಖರಗೌಡ, ಎಂ.ರತ್ನಮ್ಮ, ವಿ.ಉಷಾ ಸೇರಿ ಇತರರು ಆಕ್ರೋಶ ಹೊರ ಹಾಕಿದರು.ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದಾಗ ಪಿಐ ಕೆ.ಬಿ. ವಾಸುಕುಮಾರ್ ಪ್ರತಿಕ್ರಿಯಿಸಿ, ಕಾನೂನು ಪ್ರಕಾರ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ ಮಾತನಾಡಿ, ಈಗಾಗಲೇ ಇಬ್ಬರನ್ನು ಬೇರೆಡೆ ವರ್ಗಾಯಿಸಲಾಗಿದೆ. ವಿಚಾರಣಾ ವರದಿ ಆಯುಕ್ತರಿಗೆ ಸಲ್ಲಿಸಲಾಗಿದೆ. ಮುಂದಿನ ಕ್ರಮವನ್ನು ಆಯುಕ್ತರು ಕೈಗೊಳ್ಳಲಿದ್ದಾರೆ. ಎಫ್‌ಐಆರ್ ದಾಖಲಿಸುವುದು ಪೊಲೀಸ್ ಇಲಾಖೆಯ ವ್ಯಾಪ್ತಿ, ಪರಿಹಾರ ನೀಡುವುದು ಕಂದಾಯ ಇಲಾಖೆಯ ವ್ಯಾಪ್ತಿ ಎಂದು ಸ್ಪಷ್ಟನೆ ನೀಡಿದರು.ಇದೇ ವೇಳೆ ಪ್ರತಿಭಟನಾಕಾರರು ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಿಪಬ್ಲಿಕನ್ ಸೇನಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ), ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ವಿಜಯನಗರ-ಬಳ್ಳಾರಿ ಜಿಲ್ಲಾ ಸಮಿತಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘ, ಛಲವಾದಿ ಮಹಾಸಭಾ, ಅಂಬೇಡ್ಕರ್ ಸ್ವಾಭಿಮಾನಿ ಸೇನಾ, ಭೀಮ್ ಆರ್ಮಿ ಸೇರಿದಂತೆ ಅನೇಕ ದಲಿತಪರ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.