ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕ ರಾಜ್ಯ ಸರ್ಕಾರಿ ವಿಕಲ ಚೇತನ ನೌಕರರ ಸಂಘವು ನಾನಾ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಮಂಗಳಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.ವಿಕಲ ಚೇತನರ ಅಭಿವೃದ್ಧಿ ನಿಗಮ ಸ್ಥಾಪನೆ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ. 6 ರಷ್ಟು ಪ್ರಯಾಣ ಭತ್ಯೆಯ ಆದೇಶ ಜಾರಿ, ಕೇಂದ್ರ ಸರ್ಕಾರದ ಸುಗಮ್ಯ ಯೋಜನೆಯಡಿ ಸರ್ಕಾರಿ ಕಚೇರಿಗಳಲ್ಲಿ ವಿಕಲ ಚೇತನ ಸ್ನೇಹಿ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ವರ್ಗಾವಣೆಗೆ ಮುಕ್ತ ಅವಕಾಶ ನೀಡಿ
ಪ್ರತಿಭಟನೆ ನೇತೃತ್ವವಹಿಸಿದ್ದ ಜಿಲ್ಲಾಧ್ಯಕ್ಷ ಆರ್.ವಿ.ಮುನಿರಾಜು ಮಾತನಾಡಿ, ವಿಕಲ ಚೇತನ ಸರ್ಕಾರಿ ನೌಕರರಿಗೆ ವೇತನಾ ಆಯೋಗ ನೀಡಿದ ಎಲ್ಲಾ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಶಾಲಾ ಕಾಲೇಜುಗಳಲ್ಲಿನ ಶಿಕ್ಷಕರು, ಉಪನ್ಯಾಸಕರು ಬೋಧಕೇತರ ವರ್ಗದ ನೌಕರರ ಸೇವಾವಧಿಯಲ್ಲಿ ಒಂದು ಬಾರಿ ನೀಡುವ ವರ್ಗಾವಣೆ ಪ್ರಕ್ರಿಯೆ ನಿಯಮವನ್ನು ಕೈಬಿಟ್ಟು, ಅವರ ಪರಿಸ್ಥಿತಿಗೆ ಅನುಗುಣವಾಗಿ ಆಧ್ಯತೆಯ ಮೇಲೆ ಸೇವಾವಧಿಯಲ್ಲಿ ಎಷ್ಟು ಬಾರಿಯಾದರೂ ವರ್ಗಾವಣೆಯನ್ನು ಪಡೆಯಲು ಮುಕ್ತ ಅವಕಾಶ ನೀಡಬೇಕು ಎಂದರು.ವಿಶೇಷ ಚೇತನ ಅರ್ಹತೆಯುಳ್ಳ ವಿದ್ಯಾವಂತ ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯದನ್ವಯ ಸರ್ಕಾರಿ ಇಲಾಖೆಗಳಲ್ಲಿ ಹಿಂದಿನಿಂದಲೂ ಮೀಸಲಾಗಿರುವ ಭರ್ತಿ ಮಾಡದ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ರಾಜ್ಯದ ನಿರುದ್ಯೋಗಿ ವಿಶೇಷ ಚೇತನರ ಜೀವನ ನಿರ್ವಹಣೆ ಹಾಗೂ ಸಾಮಾಜಿಕ ಭದ್ರತೆಗಾಗಿ ನೀಡುತ್ತಿರುವ ಪೋಷಣಾ ಭತ್ಯೆಯನ್ನು ಮಾಹೆಯಾನ 5 ಸಾವಿರ ನೀಡಬೇಕು ಎಂದರು.
ವಿಶೇಷಚೇತನರ ಸೇವೆ ಕಾಯಂ ಮಾಡಿಗ್ರಾಮೀಣ ಪುನರ್ವಸತಿ ಯೋಜನೆಯಡಿಯಲ್ಲಿ ಗೌರವಧನ ಆಧಾರದಲ್ಲಿ ಸುಮಾರು 15 ವರ್ಷಗಳಿಗೂ ಅಧಿಕ ಕಾಲದಿಂದ ಸೇವೆಸಲ್ಲಿಸುತ್ತಿರುವ ವಿಶೇಷ ಚೇತನ ಕಾರ್ಯಕರ್ತರನ್ನು ಕಾಯಂಗೊಳಿಸಿ ಉದ್ಯೋಗ ಭದ್ರತೆ ನೀಡುವುದು.ಇಲ್ಲವೆ ಕನಿಷ್ಟವೇತನ ಜಾರಿಮಾಡಿ ಅವರಿಗೆ ಜೀವನ ಭದ್ರತೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ವಿಶೇಷ ಚೇತನರ ಮೇಲೆ ಇಲಾಖೆಗಳಲ್ಲಿ ನಡೆಯುತ್ತಿರುವ ಶೋಷಣೆ ಕಿರುಕುಳ ತಪ್ಪಿಸಲು 2016ರ ಕಾಯ್ದೆಯನ್ವಯ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುವುದು. ಬಸ್ ಪಾಸ್ ಪಾಸ್‌ನ 100 ಕಿ.ಮಿ.ಮಿತಿಯನ್ನು ರದ್ಧುಮಾಡಿ ಶಕ್ತಿ ಯೋಜನೆ ಮಾದರಿಯಲ್ಲಿ ರಾಜ್ಯಾಧ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು. ಸುಗಮ್ಯ ಯೋಜನೆಯಂತೆ ರಾಜ್ಯದ ಉದ್ದಗಲಕ್ಕೂ ಇರುವ ಸರ್ಕಾರಿ ಕಚೇರಿಗಳಲ್ಲಿ ರ‍್ಯಾಂಪ್‌ಗಳು, ವಿಶೇಷ ಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಅನುದಾನ ಮೀಸಲಿಡಲಿವಿಶ್ವವಿದ್ಯಾಲಯ, ನಿಗಮ ಮಂಡಳಿ,ಪರಿಷತ್ತು ಸೇರಿ ಸ್ವಾಯತ್ತ ಸಂಸ್ಥೆಗಳ ಅಧ್ಯಕ್ಷ ಸ್ಥಾನ, ಸದಸ್ಯ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವಾಗ 2016ರ ಕಾಯ್ದೆಯಂತೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲು ಸೂಕ್ತ ನಿಯಮಾವಳಿ ರೂಪಿಸುವುದು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಆಯೋಜಿಸುತ್ತಿರುವ ಸಾಹಿತ್ಯ ಸಾಂಸ್ಕೃತಿಕ ಚಟವಟಿಕೆಗಳನ್ನು, ಕ್ರೀಡಾ ಚಟವಟಿಕೆ ಹಮ್ಮಿಕೊಳ್ಳಲು ವಿಕಲಚೇತನ ಸಂಘಗಳಿಗೆ ಶೇ.5ರಷ್ಟು ಪ್ರತ್ಯೇಕ ಅನುದಾನ ಮೀಸಲಾಗಿಟ್ಟು ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ,ಖಜಾಂಚಿ ಚಂದ್ರಪ್ಪ,ಗೌರವಾಧ್ಯಕ್ಷ ಡಾ.ಆರ್.ನಾರಾಯಣಸ್ವಾಮಿ,ಎ.ವಿ.ವೆಂಕಟನರಸಪ್ಪ,ಪ್ರಕಾಶ್, ನಾಗರಾಜ್, ಶಶಿಧರ್, ಗೀತಾ,ಶಿವಣ್ಣ,ವಿಶ್ವನಾಥ್, ಕೆಎಸ್‌ಆರ್‌ಟಿಸಿ ನೇರ ಗುತ್ತಿಗೆ ನೌಕರ ಬಸವರಾಜ್ ಕೋಡಂಗಲ್ ಮತ್ತಿತರರು ಇದ್ದರು.