ಬರಪೀಡಿತ ಮಂಡ್ಯ ಜಿಲ್ಲೆಗೆ 2 ಸಾವಿರ ಕೋಟಿರು. ಪರಿಹಾರ ಬಿಡುಗಡೆಗೆ ಆಗ್ರಹ

KannadaprabhaNewsNetwork |  
Published : Sep 09, 2026, 02:00 AM IST
7ಕೆಎಂಎನ್ ಡಿ23 | Kannada Prabha

ಸಾರಾಂಶ

ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು. ವಿರೋಧ ಪಕ್ಷಗಳೂ ಕೂಡ ಇಂತಹ ವಿಚಾರದಲ್ಲಿ ಯಾವುದೇ ಬೇಡಿಕೆಯನ್ನು ಮಂಡಿಸುತ್ತಿಲ್ಲ. ರಾಜಕೀಯ ಪಕ್ಷಗಳ ಇಂತಹ ಬೇಜವಾಬ್ದಾರಿ ನಡೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಬರಪೀಡಿತ ಮಂಡ್ಯ ಜಿಲ್ಲೆಗೆ 2 ಸಾವಿರ ಕೋಟಿ ರು. ಪರಿಹಾರ ಬಿಡುಗಡೆ ಮಾಡುವ ಜೊತೆಗೆ ರೈತರು ಮತ್ತು ಕೂಲಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಆಡಳಿತ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಯ ನೂರಾರು ಕಾರ್ಯಕರ್ತರು, ಮಳೆ ಕೊರತೆಯಿಂದ ರೈತರಿಗೆ ಉಂಟಾಗುವ ನಷ್ಟ ತುಂಬಿಸಿ ಕೊಡುವ ಮತ್ತು ಕೂಲಿಕಾರ್ಮಿಕರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೊಷಣೆ ಕೂಗಿದರು.

ನಂತರ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಕೆಲ ಕಾಲ ಧರಣಿ ನಡೆಸಿದ ವೇಳೆ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ರಾಜ್ಯ ಸರ್ಕಾರವು ಮಂಡ್ಯ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಈ ಘೋಷಣೆ ಕೇವಲ ಕಾಗದ ಪತ್ರಗಳ ಮೇಲೆ ಉಳಿಯದೆ ಅದಕ್ಕೆ ಪೂರಕವಾಗಿ ಪರಿಹಾರ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವ ಮೂಲಕ ಜಿಲ್ಲೆಯ ಜನರ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸುಶೀಲ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು. ವಿರೋಧ ಪಕ್ಷಗಳೂ ಕೂಡ ಇಂತಹ ವಿಚಾರದಲ್ಲಿ ಯಾವುದೇ ಬೇಡಿಕೆಯನ್ನು ಮಂಡಿಸುತ್ತಿಲ್ಲ. ರಾಜಕೀಯ ಪಕ್ಷಗಳ ಇಂತಹ ಬೇಜವಾಬ್ದಾರಿ ನಡೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ಸಂಕಷ್ಟದ ಸಮಯದಲ್ಲಿ ಉಂಟಾಗುತ್ತಿರುವ ಆತಂಕ ಮತ್ತು ಅಭ್ರದ್ರತೆ ದೂರ ಮಾಡಲು ಸಂಬಂಧಿಸಿದ ಪ್ರಾಧಿಕಾರಗಳು ಮತ್ತು ಕೇಂದ್ರ ಸರ್ಕಾರ ಶಾಶ್ವತ ಸಂಕಷ್ಟ ಪರಿಹಾರ ಸೂತ್ರ ರೂಪಿಸಬೇಕು ಎಂದು ಆಗ್ರಹಿಸಿದರು.

ರೈತರ ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ ಪರಿಹಾರ ಮತ್ತು ಕೂಲಿಕಾರರ ಕೂಲಿ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ವಿಬಿಜಿ ಗ್ರಾಮ್‌ಜಿ ಯೋಜನೆಯಡಿ ದಿನಗೂಲಿ 700 ರು.ಗೆ ಹೆಚ್ಚಿಸಿ ವಾರ್ಷಿಕ ಕುಟುಂಬಕ್ಕೆ 200 ದಿನ ಕೆಲಸ ನೀಡಬೇಕು. ಜಿಲ್ಲೆಯ ಎಲ್ಲಾ ರೈತರು, ಕೂಲಿಕಾರರ ಮಹಿಳಾ ಸ್ವ ಸಹಾಯ ಸಂಘ ಹಾಗೂ ಮೈಕ್ರೋ ಫೈನಾನ್ಸ್‌ಗಳ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕಾವೇರಿ ನೀರಿನ ಕೊರತೆ ಸನ್ನಿವೇಶದಲ್ಲಿ ಮಧ್ಯಪ್ರವೇಶ ಮಾಡಲು ೫ ಸಾವಿರ ಕೋಟಿ ರು.ಗಳ ಶಾಶ್ವತ ಪರಿಹಾರ ನಿಧಿ ಸ್ಥಾಪಿಸಬೇಕು. ಶಾಶ್ವತ ಸಂಕಷ್ಟ ಪರಿಹಾರ ಸೂತ್ರ ರೂಪಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಬೇಕು. ಬರಪೀಡಿತ ಜಿಲ್ಲ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ರೈತ ಕೂಲಿಕಾರರಿಂದ ಯಾವುದೇ ಕಂದಾಯ ಹಾಗೂ ಬ್ಯಾಂಕ್ ಸಾಲಗಳನ್ನು ಬಲವಂತವಾಗಿ ವಸೂಲಿ ಮಾಡಬಾರದು. ಜಾನುವಾರುಗಳ ಕುಡಿವ ನೀರಿಗಾಗಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಡಾ.ಅಶೋಕ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಘಟಕದ ಅಧ್ಯಕ್ಷೆ ಪ್ರೇಮಮ್ಮ, ಕಾರ್ಯದರ್ಶಿ ವರಲಕ್ಷ್ಮಿ, ಖಜಾಂಚಿ ಮಂಜುಳ, ಲಕ್ಷ್ಮಮ್ಮ, ರಾಧಿಕ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಿತ್ರ್ಯತೆಯಿಂದ ಗಣೇಶೋತ್ಸವ ಆಚರಿಸಿ
72 ಸಾವಿರ ಹುದ್ದೆ ಭರ್ತಿ, ಕೆಪಿಎಸ್ಸಿ ಭ್ರಷ್ಟಾಚಾರ ತಡೆಗೆ ಆಗ್ರಹ