ಮದ್ದೂರು, ಪಾಂಡವಪುರ ಬರಪೀಡಿತ ಪ್ರದೇಶವಾಗಿ ಘೋಷಿಸಲು ಒತ್ತಾಯ

KannadaprabhaNewsNetwork |  
Published : Sep 09, 2026, 02:00 AM IST
5ಕೆಎಂಎನ್ ಡಿ22 | Kannada Prabha

ಸಾರಾಂಶ

ಮದ್ದೂರು ಮತ್ತು ಪಾಂಡವಪುರ ತಾಲೂಕಿನಲ್ಲಿ ಮಳೆ ಆಗದೇ ನಾಟಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಕೆರೆಕಟ್ಟೆಗಳನ್ನು ಭರ್ತಿ ಮಾಡದೆ ಅಂತರ್ಜಲ ಕುಸಿದಿದೆ. ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಮದ್ದೂರು ತಾಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ಆಗ್ರಹ.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ಮತ್ತು ಪಾಂಡವಪುರ ತಾಲೂಕುಗಳನ್ನು ಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಬೆಂಬಲದೊಂದಿಗೆ ಪಟ್ಟಣದ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿ ಅಧ್ಯಕ್ಷ ಎಚ್. ಜಿ.ಪ್ರಭುಲಿಂಗ , ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ. ಸಿ ಉಮಾಶಂಕರ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಕಂದಾಯ ಮತ್ತು ಕೃಷಿ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಬರಪೀಡಿತ ಪ್ರದೇಶಗಳ ಸರಿಯಾದ ರೀತಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ. ಇದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಧರಣಿ ನಿರತರು ಕಿಡಿಕಾರಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗ ಮಾತನಾಡಿ, ತಾಲೂಕಿನಲ್ಲಿ ಮಳೆ ಆಗದೇ ನಾಟಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಕೆರೆಕಟ್ಟೆಗಳನ್ನು ಭರ್ತಿ ಮಾಡದೆ ಅಂತರ್ಜಲ ಕುಸಿದಿದೆ. ಬೆಳೆದಿರುವ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಮದ್ದೂರು ತಾಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ಆಗ್ರಹಿಸಿದರು.

ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಸೊ.ಸಿ.ಪ್ರಕಾಶ್ ಮಾತನಾಡಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸದೆ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡದೆ ತಾಲೂಕಿನ ರೈತರಿಗೆ ದ್ರೋಹ ಮಾಡಿದ್ದಾರೆ. ತಕ್ಷಣ ಬರಪೀಡಿತ ತಾಲೂಕಾಗಿ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ತಮಿಳುನಾಡಿಗೆ 9000 ಸಾವಿರ ಕ್ಯುಸೆಕ್ ನೀರನ್ನು ಹರಿಯ ಬಿಡಲಾಗುತ್ತಿದೆ. 1000 ಕ್ಯುಸೆಕ್ ನೀರು ಮಾತ್ರ ನಾಲೆಗಳಿಗೆ ಹರಿಸಲಾಗುತ್ತಿದೆ. ಉಳಿಕೆ 8,000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಟ್ಟು ರೈತರಿಗೆ ದ್ರೋಹ ಬಗೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಕಟ್ಟು ಪದ್ಧತಿಯಲ್ಲಿ ನೀರು ಹರಿಸುತ್ತಿರುವ ಸರ್ಕಾರಕ್ಕೆ ಮದ್ದೂರು ಹಾಗೂ ಮಳವಳ್ಳಿ ಕೊನೆ ಭಾಗಕ್ಕೆ ನೀರು ಹರಿಸಲು ಸಾಧ್ಯವಾಗಿಲ್ಲ. ಆದರೆ ತಮಿಳುನಾಡಿನ ರೈತರ ಹಿತ ಕಾಪಾಡಲು ಹೊರಟಿದೆ. ಜಿಪಂ, ಜಿಲ್ಲಾಡಳಿತ ಪರ್ಯಾಯ ಬೆಳೆ ಬೆಳೆಯಿರಿ ಎಂದು ಕರ ಪತ್ರದ ಮೂಲಕ ಪ್ರಚಾರ ಪಡಿಸುತ್ತಿದ್ದಾರೆ. ಆದರೆ, ಭೂಮಿ ಹವಾಗುಣ, ಫಲವತ್ತತೆ ಆಧಾರದ ಮೇಲೆ ಬೆಳೆ ಬೆಳೆಯಬೇಕು. ಅಧಿಕಾರಿಗಳ ಅವೈಜ್ಞಾನಿಕತೆಯಿಂದ ಈ ರೀತಿ ಕ್ರಮ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೂಡಲೇ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆ ಪರಿಹಾರ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ತಹಸೀಲ್ದಾರ್ ಡಾ. ಶಿವಕುಮಾರ ಬಿರಾದರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್, ಕಾವೇರಿ ನೀರಾವರಿ ನಿಗಮ ಎಇಇ ನಾಗರಾಜು, ತೋಟಗಾರಿಕೆ ಇಲಾಖೆ ಎಡಿ ದಿವ್ಯಾ ಎಚ್. ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಮುಖಂಡ ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಮಂಡ್ಯ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ ಪಣ್ಣೆದೊಡ್ಡಿ, ವೆಂಕಟೇಶ, ಗುಡಿದೊಡ್ಡಿ ಶಿವಲಿಂಗಯ್ಯ, ಜಗದೀಶ, ರಾಮಸ್ವಾಮಿ, ಕೋಣಸಾಲೆ ಲಿಂಗರಾಜು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಯುವ ಘಟಕ ಅಧ್ಯಕ್ಷ ವಿ.ಪಿ.ವಿಶ್ವಾಸ್, ವಿ.ಎಚ್.ಶಿವಲಿಂಗಯ್ಯ, ಬೋರಾಪುರ ಸಿದ್ದರಾಮ, ಎಂ.ವೀರಪ್ಪ ಗೆಜ್ಜಲಗೆರೆ, ವೀರಪ್ಪ , ಕಲ್ಯಾಣಿ, ರಾಮಣ್ಣ, ವೀರಭದ್ರಾಚಾರಿ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಿತ್ರ್ಯತೆಯಿಂದ ಗಣೇಶೋತ್ಸವ ಆಚರಿಸಿ
72 ಸಾವಿರ ಹುದ್ದೆ ಭರ್ತಿ, ಕೆಪಿಎಸ್ಸಿ ಭ್ರಷ್ಟಾಚಾರ ತಡೆಗೆ ಆಗ್ರಹ