ಕುಮಟಾ: ತಾಲೂಕಿನ ಹಳಕಾರದಲ್ಲಿರುವ ಅಂಚೆ ಇಲಾಖೆಯ ಶಾಖಾ ಕಚೇರಿಯ ಅಧಿಕಾರಿಯು ಗ್ರಾಹಕರೊಂದಿಗೆ ಸರಿಯಾಗಿ ಸ್ಪಂದಿಸದೇ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಕೂಡಲೇ ಸೂಕ್ತ ತನಿಖೆ ನಡೆಸುವ ಜತೆಗೆ ಅಲ್ಲಿನ ಶಾಖಾಧಿಕಾರಿಯನ್ನು ವರ್ಗಾಯಿಸುವಂತೆ ಆಗ್ರಹಿಸಿದ್ದಾರೆ.
ಹಳಕಾರದ ಅಂಚೆ ಶಾಖಾಧಿಕಾರಿ ತಮ್ಮ ಮನೆಯ ಚಾವಣಿಯಲ್ಲಿ ಅಂಚೆ ಕಚೇರಿ ತೆರೆದಿದ್ದು, ಅಪಾಯಕಾರಿಯಾದ ಏಣಿಯ ಮೇಲೆ ವೃದ್ಧರು, ಅಶಕ್ತರು, ಅಂಗವಿಕಲರು ಹತ್ತಲಾಗದೇ ಸಮಸ್ಯೆಯಾಗುತ್ತಿದೆ. ಅಂಚೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡದೇ ಪಾಸ್ ಬುಕ್‌ಗಳನ್ನು ೩ ತಿಂಗಳಿಗೂ ಹೆಚ್ಚು ತಮ್ಮ ಬಳಿಯೇ ಇಟ್ಟುಕೊಂಡು, ಬಡ್ಡಿ ಸೇರಿಸಲು ಮುಖ್ಯ ಬ್ರಾಂಚಿಗೆ ಪಾಸ್ ಪುಸ್ತಕ ಹೋಗಿದೆ ಎನ್ನುತ್ತಾರೆ.
ಕೆಲವರಿಗೆ ಠೇವಣಿ ಇಡುತ್ತೇನೆ ಎಂದು ಹೇಳಿ ವಿತ್ ಡ್ರಾ ಫಾರ್ಮ್‌ಗೆ ಸಹಿ ಪಡೆದು ಅವ್ಯವಹಾರ ಮಾಡಿದ್ದಾರೆ. ಬಳಿಕ ಎಫ್‌ಡಿ ಪ್ರಮಾಣಪತ್ರ ಕೇಳಿದರೆ ನೀಡದೇ ಹಣವನ್ನು ನೀವು ನಗದಾಗಿ ಪಡೆದುಕೊಂಡಿರುವುದಾಗಿ ಹೇಳುತ್ತಾರೆ. ಮನೆ ಮಂದಿ ಹೋಗಿ ವಿಚಾರಿಸಿದರೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಇಲ್ಲಸಲ್ಲದ ಆರೋಪ ಹೊರಿಸುತ್ತಾರೆ.ಸರ್ಕಾರದ ಯೋಜನೆಗಳಾದ ವೃದ್ಧಾಪ್ಯ ವೇತನ, ಗೃಹಲಕ್ಷ್ಮೀ, ವಿಧವಾವೇತನ ಮುಂತಾದವುಗಳನ್ನು ಸರಿಯಾಗಿ ನೀಡದೇ ಅವ್ಯವಹಾರ ಮಾಡಿದ್ದಾರೆ. ಹೀಗೆ ಜನರ ವಿಶ್ವಾಸ ದ್ರೋಹವೆಸಗಿ ಲಕ್ಷಾಂತರ ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ನಡೆದಿರುವ ಅನ್ಯಾಯಕ್ಕೆ ಯೋಗ್ಯ ನ್ಯಾಯ ಕೊಡಿಸಬೇಕು ಎಂದು ಮನವಿಯಲ್ಲಿ ಬೇಬಿ ಸುರೇಶ ಹರಿಕಂತ್ರ, ಕುಸುಮಾ ಶಾಂತಾರಾಮ ಹರಿಕಂತ್ರ, ಲಕ್ಷ್ಮೀ ರಾಮ ಪಟಗಾರ, ರಾಜೇಶ್ವರಿ ಡಿ. ಪಟಗಾರ, ಕೃಷ್ಣ ಪಟಗಾರ, ಸುಕ್ರಿ ನಾರಾಯಣ ಮುಕ್ರಿ, ಗಂಗೆ ಬೊಮ್ಮ ಪಟಗಾರ, ಮೂಕಾಂಬಿಕಾ ಹರಿಕಂತ್ರ ಇನ್ನಿತರರು ಒತ್ತಾಯಿಸಿದ್ದಾರೆ. ಸ್ಥಳೀಯ ಪ್ರಮುಖರಾದ ಜಿ.ಎಸ್. ಗುನಗಾ, ಶಾಂತಾರಾಮ ಹರಿಕಂತ್ರ ಇತರರು ಇದ್ದರು. ಏಣಿ ಹತ್ತದಂತೆ ಸೂಚನೆ