ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಿಂದ ಪೊಲೀಸ್ ಉಪ ಮಹಾನಿರೀಕ್ಷಕರಿಗೆ ಮನವಿ
ಶಹಾಪುರದ ಸರ್ಕಾರಿ ಗೋದಾಮಿನಲ್ಲಿ ನಡೆದ ಅಕ್ಕಿ ಅಕ್ರಮ ಪ್ರಕರಣದಲ್ಲಿ ಶಂಕಿತ ಆರೋಪಿ ಸನ್ಮಾನಿಸಿದ್ದ ಪೊಲೀಸರ ಅಮಾನತುಗೊಳಿಸಬೇಕೆಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಪೊಲೀಸ್ ಉಪ ಮಹಾನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಅಕ್ಕಿ ಅಕ್ರಮದ ನಿಷ್ಪಕ್ಷವಾಗಿ ತನಿಖೆ ಮಾಡಬೇಕಾಗಿದ್ದ ಪೊಲೀಸ್ ಅಧಿಕಾರಿಗಳು ಇತ್ತೀಚೆಗೆ ಖಾಕಿ ಸಮವಸ್ತ್ರದಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆ ವ್ಯಕ್ತಿಗೆ ಸನ್ಮಾನಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂತಹ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಚೆನ್ನಪ್ಪ, ಪೊಲೀಸ್ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಈ ಅಕ್ಕಿ ನಾಪತ್ತೆಯಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಹಕಾರ ಸಂಘದ ಅಧ್ಯಕ್ಷ ಗುರುನಾಥರೆಡ್ಡಿ ಹಳಿಸಗರ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೇಶಕ ಭೀಮರಾಯ ಹಾಗೂ ಅಕ್ರಮ ಪಡಿತರ ಸಾಗಾಣಿಕೆದಾರ ಮಲ್ಲಿಕ್ ಚಾಮನಾಳ ಅವರು ಕಾರಣರಾಗಿದ್ದಾರೆಂದು ಆರೋಪಿಸಿದ ಚೆನ್ನಪ್ಪ, ಪೊಲೀಸ್ ಉಪ ಮಹಾ ನಿರೀಕ್ಷಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಬದಲಾವಣೆಗೆ ಆಗ್ರಹ: ಅನ್ನಭಾಗ್ಯ ಅಕ್ಕಿ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಪೈಕಿ ಕೆಲವರು, ಅಕ್ರಮದಲ್ಲಿ ಕೇಳಿಬಂದಿರುವ ವ್ಯಕ್ತಿಗೆ ಸನ್ಮಾನ ಮಾಡಿರುವುದರಿಂದ ಅಂತಹವರನ್ನು ತನಿಖೆಯಿಂದ ದೂರವಿಡಬೇಕು ಎಂದು ಆಗ್ರಹಿಸಿ ಪ್ರಾಂತ ರೈತ ಸಂಘವು ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.