ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪಾಳೆ ಗ್ರಾಮದಲ್ಲಿ ನಡೆದ ಧರ್ಮಗುರುಗಳ ಮಹಾಸಮ್ಮೇಳನದಲ್ಲಿ ಐಸಿಸ್ ಉಗ್ರರ ಜತೆ ನಂಟು ಇದ್ದವರು ಭಾಗಿಯಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಈ ರೀತಿ ಹುಚ್ಚರಂತೆ ವರ್ತಿಸುವುದನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ, ಮುಸ್ಲಿಂ ಧರ್ಮಗುರುಗಳ ಸಮ್ಮೇಳನದ ಉಸ್ತುವಾರಿ ಎ.ಎಂ. ಹಿಂಡಸಗೇರಿ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳರ ಮಾತು ಕೇಳಿ ನನಗೆ ಆಶ್ಚರ್ಯವಾಗಿದೆ. ಇದನ್ನು ನಾನು ಖಂಡಿಸುವೆ. ಈ ಹೇಳಿಕೆ ಸಣ್ಣ ವಿಷಯವಲ್ಲ. ಅಂದಿನ ಕಾರ್ಯಕ್ರಮದಲ್ಲಿ ಸರ್ಕಾರದ ಎಲ್ಲ ಜನಪ್ರತಿನಿಧಿಗಳು, ನೂರಾರು ಧರ್ಮಗುರುಗಳು ಭಾಗವಹಿಸಿದ್ದರು. ಈ ರೀತಿಯ ಹೇಳಿಕೆ ನೀಡುತ್ತಿರುವ ಯತ್ನಾಳರ ಮನಸ್ಸು ಸ್ಥಿರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರ ಪಕ್ಷದ ವಿರುದ್ಧವೇ ಯತ್ನಾಳ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಅವರಿಗೆ ಒಳ್ಳೆ ಬುದ್ಧಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ರಾಜಕೀಯವಾಗಿ ಮಾತನಾಡಲಿ, ಆದರೆ, ಈ ರೀತಿಯಾಗಿ ಧಾರ್ಮಿಕವಾಗಿ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಅಲ್ಲಿ ಅನೇಕ ಗುರುಗಳು ಬಂದು ಎಲ್ಲ ಧರ್ಮಗಳಲ್ಲಿ ಶಾಂತಿ ನೆಲೆಸಬೇಕು ಎನ್ನುವ ಉದ್ದೇಶದಿಂದ ಈ ಧರ್ಮ ಸಮ್ಮೇಳನ ಹಮ್ಮಿಕೊಂಡು ಸಾಮಾಜಿಕ, ಶೈಕ್ಷಣಿಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ.ನಮ್ಮಲ್ಲಿ ಇಂದಿಗೂ ಶೈಕ್ಷಣಿಕವಾಗಿ ಹಿಂದುಳಿದವರಿದ್ದಾರೆ. ಅವರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ಉದ್ದೇಶಪೂರ್ವಕವಾಗಿ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಹಾಗೊಂದು ವೇಳೆ ಐಸಿಸ್ ನಂಟಿದ್ದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಯತ್ನಾಳ್ ಬಹಿರಂಗಪಡಿಸಲಿ ಎಂದರು.