ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಬೆಂಗಳೂರಿನ ಎಚ್.ಎನ್. ವ್ಯಾಲಿ ಎರಡನೇ ಹಂತದ ಶುದ್ಧೀಕರಿಸಿದ ನೀರು ಹರಿಸುತ್ತಿರುವ ಕಾರಣ ನಮ್ಮ ಜಿಲ್ಲೆಯ ಕೆರೆಗಳಿಂದ ಬೋರ್‌ವೆಲ್‌ಗಳ ಮೂಲಕ ಮರುಪೂರಣಗೊಂಡು ನಾವು ಬೆಳೆಯುವ ತರಕಾರಿ ಕುಡಿಯಲು ಬಳಸುತ್ತಿರುವ ನೀರಿನಲ್ಲಿ ಯುರೇನಿಯಂ, ನೈಟ್ರೆಟ್, ಲೆಡ್, ಫೋಟಾಶಿಯಂ, ಪ್ಲೋರೈಡ್ ಅಂಶ ಯಥೇಚ್ಚವಾಗಿ ಪತ್ತೆಯಾಗಿದೆ. ಇಲ್ಲಿನ ನೀರು ಕುಡಿಯಲು ಯೋಗ್ಯವಿಲ್ಲ. ತರಕಾರಿಗಳು ಬಳಕೆಗೇ ಅರ್ಹವಲ್ಲ ಎಂಬುದು ದೃಢಪಟ್ಟಿದೆ. ಈ ಮಾಹಿತಿ ಹರಡುತಿದ್ದಂತೆ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರ, ಮಂಚೇನಹಳ್ಳಿ ಮಟ್ಟಿಗೆ ನಾನು ಮಾತನಾಡುತಿದ್ದೇನೆ. ಪ್ರದೀಪ್ ಈಶ್ವರ್ ಶಾಸಕರಾಗುವ ಮೊದಲು ಎಚ್.ಎನ್. ವ್ಯಾಲಿ ನೀರು ಜಿಲ್ಲೆಗೆ ಹರಿಸುತ್ತಿರುವುದರಿಂದ ಮುಂದೆ ನಮ್ಮ ಜಿಲ್ಲೆಯ ಜನ ಅನುಭವಿಸುವ ಸಮಸ್ಯೆಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದರು. ಈಗ ಸರ್ಕಾರದ ಪ್ರತಿನಿಧಿಯಾಗಿ ಬಾಯಿಬಿಟ್ಟರೆ ಎಚ್.ಎನ್. ವ್ಯಾಲಿ ನೀರು ಅಂತರ್ಜಲ ಹೆಚ್ಚಿಸಲು ಮಾತ್ರ ಹರಿಸುತ್ತಿದ್ದೇವೆ. ಇದು ಕೃಷಿಗಾಗಲಿ ಕುಡಿಯಲಾಗಲಿ ಬಳಸುವುದಕ್ಕಲ್ಲ ಎಂದು ಹೇಳುತ್ತಾರೆ. ಆದರೆ ಜಿಲ್ಲೆಯಲ್ಲಿ ಮೊದಲು ಸಂಗ್ರಹವಾಗುವ ಕೆರೆ ಕಂದವಾರ ಕೆರೆ. ಆ ಕಂದವಾರ ಕೆರೆಯ ಆಜು ಬಾಜು ಕೊರೆಸಿರುವ ಬೋರ್‌ವೆಲ್‌ಗಳಿಂದ ನಗರದ ಐದಾರು ವಾರ್ಡ್‌ಗಳಿಗೆ ಹರಿಸುತ್ತಿದ್ದಾರೆ.ಅದೇ ಕೆರೆಯಿಂದ ಬೋರ್‌ವೆಲ್‌ಗಳ ಮೂಲಕ ಮನೆಗಳಿಗೆ ನೀರು ನೇರವಾಗಿ ಹರಿಸಲಾಗುತ್ತಿದೆ. ಎಚ್ಎನ್ ವ್ಯಾಲಿ ನೀರು ಹರಿಸಿರುವ ಕೆರೆಗಳು ಮತ್ತು ಅದರ ಬಳಿ ಹಾಕಿರುವ ಬೋರ್‌ವೆಲ್ ನೀರಿನಿಂದ ಬೆಳೆದ ತರಕಾರಿಗಳು ವಿಷಕಾರಿ ಎಂದು ದೃಢಪಟ್ಟಿದೆ. ಇಲ್ಲಿ ಬೆಳೆದ ತರಕಾರಿ ಬಹಳ ದಿನ ಬಾಳಿಕೆ ಬರೋಲ್ಲ. ಇನ್ಮುಂದೆ ನಮ್ಮ ಜಿಲ್ಲೆಯ ತರಕಾರಿ ನೀರು ಕಲ್ಮಶಗೊಂಡ ಕಾರಣ ಈ ಭಾಗದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಎಚ್ ಎನ್ ವ್ಯಾಲಿ ನೀರು ಜಿಲ್ಲೆಗೆ ಹರಿದ ಮೇಲೆ ಖಾಸಗಿ ಆಸ್ಪತ್ರೆಯೊಂದರಲ್ಲೇ ತಿಂಗಳಿಗೆ ಅರನೂರು ಜನ ಡಯಾಲಿಸಿಸಿ ಮಾಡಿಸಿಕೊಳ್ಳುವ ಸ್ಥಿತಿ ಬಂದಿದೆ.
ಆದ್ದರಿಂದ ಈ ಬಾರಿ ಬಜೆಟ್‌ನಲ್ಲಿ ಹಣ ಕೇಳುವ ಕೆಲಸ ಮಾಡಿ. ಇಲ್ಲದಿದ್ದರೆ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು, ಪ್ರಗತಿಪರ ಸಂಘಟನೆಗಳು, ಕಾನೂನು ತಜ್ಞರು ನಿರಾವರಿ ಹೋರಾಟಗಾರರ ಸಹ ಯೋಗದಲ್ಲಿ ಬಂದ್ ಮಾಡಲಾಗುವುದು. ಆಗಲೂ ಕ್ರಮ ಜರುಗಿಸದಿದ್ದರೆ ರಾಜಧಾನಿ ಬೆಂಗಳೂರಿಗೆ ಮತ್ತೊಮ್ಮೆ ರೈತರಿಂದ ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳ ಮೂಲಕ ದಿಗ್ಬಂಧನ ಹೆರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ದೊಡ್ಡಬಳ್ಳಾಪುರ, ನೆಲಮಂಗಲ ಶಾಸಕರು ಈ ಕಲುಷಿತ ನೀರನ್ನು ನಮ್ಮ ಕ್ಷೇತ್ರಗಳಿಗೆ ಹರಿಸಬೇಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಕಲುಷಿತ ನೀರನ್ನು ನಮ್ಮ ಜಿಲ್ಲೆಗಳಿಗೆ ಹರಿಸಬೇಡಿ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರೇ ಹೇಳಿದ್ದಾರೆ. ಶಾಸಕರೇ ಜನತೆ ನಿಮ್ಮ ವಿರುದ್ಧ ತಿರುಗಿ ಬೀಳುವ ಮೊದಲೇ ಎಚ್ಚೆತ್ತು ಕೊಳ್ಳಿ. ಈ ಬಾರಿ ಬಜೆಟ್‌ನಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿಡಿ. ನೀವು ಉಸ್ತುವಾರಿ ಸಚಿವರ ಕೈ ಹಿಡಿತೀರೋ, ಸಿಎಂ ಕಾಲಿಡಿತೀರೋ ಗೊತ್ತಿಲ್ಲ ಒಟ್ಟಿನಲ್ಲಿ ನಮಗೆ ಶುದ್ಧ ನೀರು ಬೇಕು ಎಂದು ಅಗ್ರಹಿಸಿದರು
ಈ ವೇಳೆ ಮುಖಂಡರಾದ ಶಿವಕುಮಾರ್, ರಿಯಾಜ್, ಬಿಜೆಪಿ ಮುಖಂಡರು ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಇದ್ದರು.ಸಿಕೆಬಿ-3 ಸುದ್ದಿಗೋಷ್ಟಿಯಲ್ಲಿ ಸಂದೀಪ್ ಬಿ. ರೆಡ್ಡಿ ಮಾತನಾಡಿದರು