ಬ್ಯಾಡಗಿ: ಕಟ್ಟಿಕೊಂಡ ಮನೆಗೆ ಹೊಂದಿಕೊಂಡು ಕೃಷಿಗೆ ಬಳಸಲಾಗುತ್ತಿರುವ ಪ್ರದೇಶವನ್ನೂ ಸಹ ಕಂದಾಯ ಗ್ರಾಮದ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ತಾಲೂಕಿನ ಅತ್ತಿಕಟ್ಟಿ ಗ್ರಾಮಸ್ಥರು ತಹಸೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ದನದ ಕೊಟ್ಟಿಗೆ ಮೇವುಸಂಗ್ರಹಣೆ ಕ್ರಮಬದ್ಧಗೊಳಿಸಿ: ಗ್ರಾಮೀಣ ಪ್ರದೇಶದಲ್ಲಿ ಕೇವಲ ಮನೆಯಿಂದ ಜೀವನ ನಿರ್ವಹಣೆ ಕಷ್ಟಕರ ಮನೆಗೆ ಹೊಂದಿಕೊಂಡ ಜಾಗೆಯಲ್ಲಿ ಜಾನುವಾರುಗಳ ಸಂರಕ್ಷಣೆ, ಮೇವು ಸಂಗ್ರಹಣೆಗೆ ಜಾಗದ ಅಗತ್ಯವಿದೆ, ಆದರೆ ಅಧಿಕಾರಿಗಳು ಮಾತ್ರ ಇದನ್ನು ಪರಿಗಣಿಸುತ್ತಿಲ್ಲ ಸದರಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಖಂಡಿತವಾಗಿ ಅನ್ಯಾಯವಾಗಲಿದೆ ಎಂದು ಅರೋಪಿಸಿದರು.ಅವಿಭಕ್ತ ಕಟುಂಬಕ್ಕೆ ಅನ್ಯಾಯ: ಒಂದೇ ಮನೆಯಲ್ಲಿ ಅದೇ ಕುಟುಂಬಕ್ಕೆ ಸೇರಿದ ನಾಲ್ವರು ಸಹೋದರರು ವಾಸವಿದ್ದಲ್ಲಿ ಇ-ಸೊತ್ತು ಮಾಡಿ ಸರ್ಕಾರದಿಂದ ಹಕ್ಕುಪತ್ರ ವಿತರಿಸಿದ ಬಳಿಕ 15 ವರ್ಷಗಳ ಕಾಲ ಪರಾಧೀನಕ್ಕೆ ಯೋಜನೆಯಲ್ಲಿ ಅವಕಾಶವಿಲ್ಲ. ಇದರಿಂದ ಸಹೋದರರ ನಡುವೆ ವೈಮನಸ್ಸು ಹಾಗೂ ವ್ಯಾಜ್ಯಕ್ಕೆ ಕಾರಣವಾಗಲಿದೆ. ಕೂಡಲೇ ಯೋಜನೆಯಿಂದ 15 ವರ್ಷ ಕಾಲ ಪರಾಧೀನಕ್ಕೆ ಅವಕಾಶವಿಲ್ಲ ಎಂಬ ಅಂಶವನ್ನು ಕೈಬಿಡುವಂತೆ ಮನವಿ ಮಾಡಿದರು.ಯೋಜನೆ ಸ್ಥಗಿತಗೊಳಿಸಿ:ಸರ್ಕಾರದ ಯೋಜನೆ ಜಾರಿಗೊಳಿಸಿದಲ್ಲಿ ಗ್ರಾಮದಲ್ಲಿ ಸರಿಯಾಗಿ ಎಲ್ಲ ಕುಟುಂಬಗಳಿಗೂ ನ್ಯಾಯ ಸಿಗುವುದಿಲ್ಲ, ಸ್ಥಳೀಯ ಫಲಾನುಭವಿಗಳಿಗೆ ತೊಂದರೆ ಉಂಟಾಗಲಿದ್ದು ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಈ ವೇಳೆ ಗ್ರಾ.ಪಂ. ಸದಸ್ಯ ಪ್ರಕಾಶ ಬಣಕಾರ, ಉಜ್ಜಯ್ಯ ಕರಿನಾಗಣ್ಣನವರ, ಸಂತೋಷ ಬಣಕಾರ, ಬಸಯ್ಯ ಕರಿನಾಗಣ್ಣನವರ, ಸಂಜೀವ ಮಾಳಾಪುರ, ಖಾದರ್ ದಿವಣ್ಣನವರ, ಸುರೇಶ ತಿಪ್ಪಣ್ಣನವರ, ಪರಮೇಶ ಕರಿನಾಗಣ್ಣನವರ, ಮಲ್ಲಿಕಾರ್ಜುನ ಮಾಳಾಪುರ, ಕರಬಸವ ಕೊಟ್ರಳ್ಳಿ, ಪರಮೇಶ ಹಂಜಿ ಇನ್ನಿತರರಿದ್ದರು.