ಸೋಮವಾರಪೇಟೆ: ಕಾಫಿ ಕೊಯ್ಲು ಹಾಗೂ ಶೇಖರಣೆ ಕಾರ್ಯ ಪ್ರಗತಿಯಲ್ಲಿದ್ದು, ಈ ಸಂದರ್ಭ ಬೆಳೆಗಾರರು ಬೆಳೆ ರಕ್ಷಣೆಯ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಾಫಿ ಬೆಳೆಗಾರರೊಂದಿಗೆ ಸಭೆ ನಡೆಯಿತು. ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಾದೇವ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಿರಾರು ಸಂಖ್ಯೆಯ ಕಾರ್ಮಿಕರು ಹೊರ ಭಾಗದಿಂದ ಕೆಲಸಕ್ಕೆ ಆಗಮಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.ತಮ್ಮ ತೋಟಗಳಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರು, ಲೈನ್ ಮನೆಯಲ್ಲಿ ನೆಲೆಸಿರುವ ಕಾರ್ಮಿಕರ ಬಗ್ಗೆ ಮಾಲೀಕರು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಕಾಫಿ ಕೊಯ್ಲು ನಂತರ ಕಣದಲ್ಲಿ ಒಣಗಿಸಲು ಹಾಕುವ ಕಾಫಿಯನ್ನು ಕಾವಲು ಕಾಯಲು ಸಿಬ್ಬಂದಿ ನಿಯೋಜಿಸಬೇಕು. ಸಿ.ಸಿ. ಕ್ಯಾಮೆರಾಗಳನ್ನು ಕಣಕ್ಕೆ ಅಳವಡಿಸಿದರೆ ಉತ್ತಮ ಎಂದು ಸಲಹೆ ನೀಡಿದರು.ಹೊರ ಭಾಗದಿಂದ ಆಗಮಿಸಿ ತಮ್ಮ ತೋಟಗಳಲ್ಲಿ ಖಾಯಂ ಹಾಗೂ ತಾತ್ಕಾಲಿಕವಾಗಿ ನೆಲೆಸುವ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಠಾಣೆಗೆ ಒದಗಿಸಬೇಕೆಂದು ಸೂಚಿಸಿದ ಅವರು, ಕಾರ್ಮಿಕರ ಮಕ್ಕಳನ್ನು ನೋಡಿಕೊಳ್ಳಲು ಮಾಲೀಕರೇ ವ್ಯವಸ್ಥೆ ಮಾಡಬೇಕೆಂದು ನಿರ್ದೇಶಿಸಿದರು.