ಸಿದ್ದಾಪುರ: ತಾಲೂಕಿನ ಮನಮನೆ ಗ್ರಾಪಂ ವ್ಯಾಪ್ತಿಯ ಮಳಲವಳ್ಳಿಯಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಲು ಗೋಮಾಳದ ಜಮೀನು ಮಂಜೂರು ಮಾಡಲಾಗಿದ್ದು, ಕೂಡಲೇ ಈ ಮಂಜೂರಾತಿಯನ್ನು ರದ್ದುಪಡಿಸಿ ಜಾನುವಾರುಗಳ ಮೇವಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ಬುಧವಾರ ಆಮ್ ಆದ್ಮಿ ಪಕ್ಷದ ಪ್ರಮುಖ ಹಿತೇಂದ್ರ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಲವಳ್ಳಿ ಗ್ರಾಮಸ್ಥರು ಜಾನುವಾರು ಸಹಿತ ಪಟ್ಟಣದ ಹೊಸೂರು ಸಾಗರ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಧುಸೂದನ ಕುಲಕರ್ಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಹಿತೇಂದ್ರ ನಾಯ್ಕ ಮಾತನಾಡಿ, ನೂರಾರು ವರ್ಷಗಳಿಂದ ಮಲವಳ್ಳಿ ಗ್ರಾಮಸ್ಥರು ಸರ್ವೆ ನಂ. ೬೪- ೬೭ರಲ್ಲಿ ಗೋವುಗಳ ಮೇವಿಗಾಗಿ ಬಳಸಿಕೊಳ್ಳುತ್ತಾ ಬಂದಿದ್ದು, ಈಗ ಇದನ್ನು ಕೈಗಾರಿಕಾ ವಲಯ ಎಂದು ಘೋಷಿಸಿ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ೧೦೦ ಜಾನುವಾರುಗಳಿಗೆ ೩೦ ಎಕರೆ ಮೇವಿನ ಪ್ರದೇಶ ಇರಬೇಕೆಂದು ನಿಯಮವಿದೆ. ಮಲವಳ್ಳಿ ಗ್ರಾಮದಲ್ಲಿ ೯೩೦ಕ್ಕೂ ಹೆಚ್ಚು ಜಾನುವಾರುಗಳಿವೆ. ನಿಯಮದ ಪ್ರಕಾರ ೩೦೦ ಎಕರೆ ಪ್ರದೇಶ ಬೇಕು. ಆದರೆ ಇರುವ ೪೭ ಎಕರೆ ಪ್ರದೇಶವನ್ನು ವಶಪಡಿಸಿಕೊಂಡರೆ ಜಾನುವಾರುಗಳ ಗತಿ ಏನು? ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಮೇವು ಸಿಗುತ್ತದೆ ಎಂದು ತಹಸೀಲ್ದಾರ್ ಷರಾ ಬರೆಯುತ್ತಾರೆ. ಆದರೆ ಮೀಸಲು ಅರಣ್ಯದಲ್ಲಿ ಜಾನುವಾರುಗಳ ಮೇಯಿಸಲು ಅವಕಾಶ ಕೊಡುವುದಿಲ್ಲ ಎಂದು ಅರಣ್ಯ ಇಲಾಖೆಯವರು ಹೇಳುತ್ತಾರೆ. ಹಾಗಾದರೆ ರೈತರು ಜಾನುವಾರುಗಳನ್ನು ಎಲ್ಲಿಗೆ ಒಯ್ಯಬೇಕು ಎಂದು ಪ್ರಶ್ನಿಸಿದರು.ಇಲ್ಲಿ ಗುಡಿ ಕೈಗಾರಿಕೆ ಬರುತ್ತದೆ. ನೂರಾರು ಜನರಿಗೆ ಉದ್ಯೋಗ ದೊರಕುತ್ತದೆ. ಒಮ್ಮೆ ಮಂಜೂರಾದ ಜಮೀನು ರದ್ದುಪಡಿಸಲು ಬರುವುದಿಲ್ಲ ಎಂದು ಶಾಸಕರು ಹೇಳುತ್ತಾರೆ. ಸರಿಯಾಗಿ ಆಸ್ಪತ್ರೆಯನ್ನು ನಿರ್ವಹಿಸಲಾರದವರು ಶವ ಇಟ್ಟು ಪ್ರತಿಭಟನೆ ನಡೆಸಿದಾಗಲೂ ಬಾರದವರು ಗುಡಿ ಕೈಗಾರಿಕೆಯನ್ನು ಸರಿಯಾಗಿ ನಡೆಸುತ್ತಾರೆಯೇ? ಮುಡಾದ ಸೈಟ್‌ಗಳನ್ನು ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದಾದರೆ ಈ ಪ್ರದೇಶವನ್ನು ವಾಪಸ್ ರೈತರಿಗೆ ನೀಡಬಹುದಲ್ಲ? ನಾವು ಕೈಗಾರಿಕಾ ವಲಯ ಸ್ಥಾಪಿಸುವ ಬಗ್ಗೆ ವಿರೋಧಿಸುವುದಿಲ್ಲ. ಈ ಜಾಗದಲ್ಲಿ ಬೇಡ. ಪಕ್ಕದಲ್ಲಿ ಅರಣ್ಯಭೂಮಿ ಇದೆ. ಮಂಜೂರು ಮಾಡಲಿ. ಕೇವಲ ಕೈಗಾರಿಕಾ ವಲಯ ಮಾತ್ರವಲ್ಲ, ಮೆಡಿಕಲ್ ಕಾಲೇಜು ಸುಸಜ್ಜಿತ ಆಸ್ಪತ್ರೆಯೂ ನಿರ್ಮಾಣವಾಗಲಿ ಎಂದರು.
ಈ ಸಂದರ್ಭದಲ್ಲಿ ಮಳಲವಳ್ಳಿ ಗ್ರಾಮ ಕಮಿಟಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು. ಪ್ರತಿಭಟನೆಯಲ್ಲಿ ಮಲಲವಳ್ಳಿ ಗ್ರಾಮದ ಮಹಿಳೆಯರೂ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.