ಗಜೇಂದ್ರಗಡ: ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ ಪಟ್ಟಣ ಸೇರಿ ತಾಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ನೀಡಿದರು.
ಶಿಕ್ಷಣವನ್ನು ವ್ಯಾಪಾರವನ್ನಾಗಿಸಿಕೊಂಡ ಕೆಲ ಕೊಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳು ಪೆನ್ನಿನಿಂದ ಹಿಡಿದು ಪ್ರತಿಯೊಂದು ಸಾಮಗ್ರಿಯನ್ನು ಅವರು ನಿರ್ಧರಿಸಿದ ಹಣಕ್ಕೆ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ ಪಟ್ಟಣದಲ್ಲಿ ನಾಯಿ ಕೊಡೆಯಂತೆ ಶೈಕ್ಷಣಿಕ ವಾತಾವರಣಕ್ಕೆ ಪೂರಕವಲ್ಲದ ಶೆಡ್, ಬಾಡಿಗೆ ಮನೆ ಸೇರಿ ಸ್ಥಳಗಳಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಶಿಕ್ಷಣ ಇಲಾಖೆ ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಸಂಘಟನೆಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸಂಘಟನೆಯ ತಾಲೂಕಾಧ್ಯಕ್ಷ ಯಮನಪ್ಪ ತಿರಕೋಜಿ ಮಾತನಾಡಿ, ಬೇಸಿಗೆ ರಜೆಯನ್ನು ಮುಂದಿಟ್ಟಿಕೊಂಡು ಈಗಾಗಲೇ ಅನೇಕ ಕೋಚಿಂಗ್ ಸೆಂಟರ್‌ಗಳು ತಯಾರಿ ನಡೆಸಿದ್ದು, ಪಾಲಕರು ಹಾಗೂ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ಗಳ ಪ್ರಚಾರಕ್ಕೆ ತುತ್ತಾಗಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲ ಸರ್ಕಾರಿ ಶಿಕ್ಷಕರು ಸಹ ಮನೆಗಳಲ್ಲಿ ಹಾಗೂ ಬಾಡಿಗೆ ಕಟ್ಟಡದಲ್ಲಿ ಅಕ್ರಮ ಕೋಚಿಂಗ್ ಸೆಂಟರ್‌ಗಳನ್ನು ನಡೆಸುವ ಮೂಲಕ ಅಕ್ರಮವಾಗಿ ಹಣ ಲೂಟಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆಯ ಪರವಾನಗಿ ಇಲ್ಲದೆ ನಡೆಯುವ ಬೇಸಿಗೆ ಶಿಬಿರ ಸೇರಿ ಅಕ್ರಮ ಕೋಚಿಂಗ್ ಸೆಂಟರ್‌ಗಳ ಮೇಲೆ ಶಿಕ್ಷಣ ಇಲಾಖೆ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದರು.ಈ ವೇಳೆ ವೀರೇಶ ಶಿವಸಿಂಪಗೇರ, ಪರಶುರಾಮ ಅರಗಂಜಿ, ಮಂಜುನಾಥ ಗಾಯಕವಾಡ, ಬಾಳು ತಿರಕೋಜಿ, ಪರಸಪ್ಪ ಬೋಯಿಟೆ, ದುರಗಪ್ಪ ಯಲಬುಣಚಿ, ರಾಜು ಮಾಳೊತ್ತರ, ಬಸವರಾಜ ನಿಂಭೋಜಿ, ಜೀವಪ್ಪ ಶಿಂಧೆ, ಪ್ರಕಾಶ ಹೆಳವರ ಇತರರು ಇದ್ದರು.