ಹಾವೇರಿ ಪತ್ರಿಕಾ ಭವನದಲ್ಲಿ ಬುಧವಾರ ಕರ್ನಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು.
ಹಾವೇರಿ: ಕರ್ನಾಟಕ ಕ್ಷತ್ರಿಯ ಒಕ್ಕೂಟ ಜಿಲ್ಲಾ ಘಟಕದ ನೇತೃತ್ವದಲ್ಲಿ ಫೆ. 28ರಂದು ಸಂಜೆ 4ಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ ಮೆಹರವಾಡೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2000ನೇ ಇಸ್ವಿಯಲ್ಲಿ ಹರಿಸಾ ಕೋಡೆ ಅವರು ಹಿಂದೂ ಕ್ಷತ್ರಿಯ ಮಹಾಸಭಾ ಎಂಬ ಸಂಘಟನೆ ಸ್ಥಾಪಿಸಿದರು. ಮುಂದೆ 2018ರಲ್ಲಿ ಪ್ರಸ್ತುತ ರಾಜ್ಯಾಧ್ಯಕ್ಷ ಉದಯ ಸಿಂಗ್ ಕರ್ನಾಟಕ ಕ್ಷತ್ರಿಯ ಒಕ್ಕೂಟ ಎಂದು ಮರುನಾಮಕರಣ ಮಾಡುವ ಮೂಲಕ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲೂಕು ಘಟಕಗಳಲ್ಲಿ ಸಂಘವನ್ನು ಕಟ್ಟಿದರು. ಸಂಘಟನೆ ವ್ಯಾಪ್ತಿಯಲ್ಲಿ ಸುಮಾರು 39 ಉಪ ಪಂಗಡಗಳು ಇದ್ದು, ಈ ಪೈಕಿ ಹಾವೇರಿ ಜಿಲ್ಲೆಯಲ್ಲಿ 16 ಉಪ ಪಂಗಡಗಳ ಜನರು ಇದ್ದಾರೆ. ಭಾವಸಾರ ಕ್ಷತ್ರಿಯ, ಮರಾಠಾ ಕ್ಷತ್ರಿಯ, ಸೋಮವಂಶ ಕ್ಷತ್ರಿಯ, ರಾಮವಂಶ ಕ್ಷತ್ರಿಯ, ನಾಮದೇವ, ಕಲಾಲ, ಜೋಗಿ, ಕಿಳ್ಳಿಕ್ಯಾತರ, ಲಂಬಾಣಿ, ಗೊಂದಳಿ ಕ್ಷತ್ರಿಯ ಹೀಗೆ ಅನೇಕ ಸಮುದಾಯದ ಜನರು ಇದ್ದಾರೆ. ಈ ಎಲ್ಲ ಸಮಾಜದವರು ಸೇರಿಕೊಂಡು ಫೆ. 28ರಂದು ಹಾವೇರಿಯಲ್ಲಿ ಬೃಹತ್ ಮೆರವಣಿಗೆ ನಡೆಸಲಾಗುತ್ತಿದೆ ಎಂದರು.ಮೆರವಣಿಗೆ ಮಾರ್ಗ: ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು, ಮೇಲಿನಪೇಟೆ, ಸುಭಾಸ್ ಸರ್ಕಲ್, ಪುನಃ ಮೇಲಿನಪೇಟೆ ಮಾರ್ಗವಾಗಿ ದ್ಯಾಮವ್ವನಗುಡಿ ಪಾದಗಟ್ಟಿ, ಎಂ.ಜಿ. ರಸ್ತೆ, ಎಂ.ಜಿ. ವೃತ್ತ, ಜೆ.ಪಿ. ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗದಿಂದ ಶಿವಾಜಿನಗರದಲ್ಲಿರುವ ಮರಾಠಾ ಸಮುದಾಯ ಭವನ ತಲುಪಲಿದೆ. ಮೆರವಣಿಗೆಯಲ್ಲಿ ನಾಸಿಕ್ ಡೋಲು ತಂಡ ಭಾಗವಹಿಸಲಿದೆ. ಪುರುಷರು ಬಿಳಿ ಶರ್ಟ್, ಬಿಳಿ ಪ್ಯಾಂಟ್, ಜುಬ್ಬಾ, ಪೇಟಾ ಧರಿಸಲಿದ್ದು, ಮಹಿಳೆಯರು ಸೀರೆ, ಪೇಟಾ ಧರಿಸಿ ಗಮನಸೆಳೆಯಲಿದ್ದಾರೆ ಎಂದರು.
ಗಣ್ಯರು ಭಾಗಿ: ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮೈಲಾರ ಲಿಂಗೇಶ್ವರ ದೇವಸ್ಥಾನದ ವೆಂಕಪ್ಪ ಒಡೆಯರ್, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹರಸೂರ ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ ಸಿಂಗ್, ಶಾಸಕರಾದ ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಜಿಲ್ಲೆಯ ಎಲ್ಲ ಹಾಲಿ, ಮಾಜಿ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ. ಜತೆಗೆ ಹಿಂದೂಪರ ಸಂಘಟನೆಗಳ ಮುಖಂಡರು, ಶಿವಾಜಿ ಮಹಾರಾಜರ ಅಭಿಮಾನಿಗಳು, ಪಕ್ಷಾತೀತ ನಾಯಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ನಾಗರಾಜ ಜೋರಾಪುರಿ, ಯುವ ಒಕ್ಕೂಟದ ಗೌರವಾಧ್ಯಕ್ಷ ದರ್ಶನ ಲಮಾಣಿ ಮಾತನಾಡಿದರು.
ಮಹಾವೀರ ಘನಾತೆ, ಪ್ರಮೋದ ನವಲೆ, ಉದಯ ತಾಂಗಳೆ, ಭಾಗ್ಯಶ್ರೀ ಮೋರೆ, ಚಂದ್ರಶೇಖರ ಜಾಧವ, ನಾಮದೇವ ಸಿಂಪಿ, ರಮೇಶ ಮಾಳೋದೆ, ಲಕ್ಷ್ಮಣಸಿಂಗ್ ರಜಪೂತ, ಧರ್ಮರಾಜ ಕಜೂರಕರ, ದೇವರಾಜ ಗುಂಡೆ, ನಾಗೇಂದ್ರಪ್ಪ ಡಿ.ಕೆ., ವಿಶಾಲ ಸುಲಾಕೆ, ಶ್ರೀಕಾಂತ ಮಾಳದಕರ ಇದ್ದರು.