ತಮಟೆ ಬಾರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು
ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿ ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳಿಂದ ಪಟ್ಟಣದ ಬಸಾಪೂರ ಕ್ರಾಸ್‌ನಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಮೆರವಣಿಗೆಯನ್ನು ಪಟ್ಟಣದ ಗಣೇಶ ದೇವಸ್ಥಾನದಿಂದ ಬಸಾಪೂರ ಕ್ರಾಸ್ ವೆರೆಗೆ ನಡೆಸಿ, ಗದಗ-ಹಾವೇರಿ ರಸ್ತೆ ತಡೆ ನಡೆಸಿ, ತಮಟೆ ಬಾರಿಸುತ್ತಾ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಈಗಾಗಲೇ ರಾಜ್ಯದ ವಿವಿಧ ತಾಲೂಕುಗಳನ್ನು ಬರ ಪ್ರದೇಶಗಳೆಂದು ಎರಡು ಹಂತದಲ್ಲಿ ಘೋಷಿಸಿದೆ. ಆದರೆ ಗದಗ ತಾಲೂಕಿನಲ್ಲಿ ತೀವ್ರ ಬರದ ಛಾಯೆ ಆವರಿಸಿ, ರೈತರು ಸಂಕಷ್ಟದಲ್ಲಿದ್ದಾರೆ. ಈ ವರೆಗೂ ಬರ ಪಟ್ಟಿಗೆ ಸೇರಿಸದೇ ರಾಜ್ಯ ಸರ್ಕಾರ ಗದಗ ಜಿಲ್ಲೆಗೆ ತಾರತಮ್ಯ ಮಾಡುತ್ತಿದೆ. ಮುಖ್ಯಮಂತ್ರಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಗದಗ ತಾಲೂಕಿಗೆ ಭೇಟಿ ನೀಡಿ, ಬರ ಪರಿಶೀಲನೆ ಮಾಡಿದ್ದಾರೆ. ಆದರೂ ಕೂಡ ಕ್ರಮ ಕೈಗೊಂಡಿಲ್ಲ. ಕೃಷಿ ಇಲಾಖೆ, ಜಿಲ್ಲಾಡಳಿತ ಎಲ್ಲ ವರದಿ ಸಲ್ಲಿಸಿದ್ದಾರೆ. ಸರ್ಕಾರ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ದನಕರುಗಳಿಗೆ ನೀರು, ಮೇವಿಲ್ಲ ರೈತರ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ. ಕ್ಷೇತ್ರದ ಶಾಸಕರು, ಸಂಸದರು, ಜನ ಪ್ರತಿನಿಧಿಗಳು ರೈತ ಪರ ನಿಂತು ಪಕ್ಷಾತೀತವಾಗಿ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕು, ಗದಗ ತಾಲೂಕು ಸೇರಿದಂತೆ ಸಂಪೂರ್ಣ ಜಿಲ್ಲೆಯನ್ನ ಬರ ಪೀಡಿತ ಪ್ರದೇಶ ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇಲ್ಲವಾದರೇ ರಾಜಿನಾಮೆ ಕೊಟ್ಟು ನಮ್ಮ ಜತೆ ಹೋರಾಟ ಮಾಡಲಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಕೂಡ ಬರೆದಿದ್ದೇನೆ. ರೈತರ ಕಲ್ಯಾಣ ದೃಷ್ಟಿಯಿಂದ ತಕ್ಷಣ ಬೆಳೆವಿಮೆ ಘೋಷಿಸಲು ಮತ್ತು ಗದಗ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕೆಂದು ಪತ್ರದ ಮೂಲಕ ಒತ್ತಾಯಿಸಲಾಗಿದೆ. ವಿಧಾನಸಭೆ ಅಧಿವೇಶನ ಮುಗಿಯೊದರೊಳಗೆ ಗದಗ ತಾಲೂಕು ಸೇರಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಸಹಿತ ಬರಪೀಡಿತ ಘೋಷಣೆ ಮಾಡಿ, ಬೆಳೆವಿಮೆಯಲ್ಲಿ ಏನೂ ತಾಂತ್ರಿಕ ಸಮಸ್ಯೆ ಬಂದಿದೆಯೋ ಅದನ್ನ ನಿವಾರಿಸಿ ರೈತರಿಗೆ ನ್ಯಾಯಯುತ ನಿರ್ಣಯ ಕೊಡಿ ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಸಹಾಯಕ ಕೃಷಿ ಅಧಿಕಾರಿ ಮಲ್ಲಯ್ಯ ಕೊರವನವರ, ಮುಖಂಡರಾದ ಶಿವಣ್ಣ ನೀಲಗುಂದ, ಎಂ.ಡಿ.ಬಟ್ಟೂರ, ಬಸವರಾಜ ಸುಂಕಾಪುರ, ರಾಮಣ್ಣ ಕಮಾಜಿ, ಅಶೋಕ ಹುಣಸಿಮರದ, ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಾಂಬಳೆ, ದೇವರಾಜ ಅಣ್ಣಿಗೇರಿ, ದೇವರಾಜ ಸಂಗನಪೇಟಿ, ಕಿರಣ ಕುಲಕರ್ಣಿ, ಮಹಾಂತೇಶ ಗುಂಜಳ, ಮಹ್ಮದಲಿ ಶೇಖ, ಬಸವರಾಜ ಕರಿಗಾರ ಸೇರಿದಂತೆ ನೂರಾರು ರೈತರು ಇದ್ದರು.