ಕೇಂದ್ರದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಆಗ್ರಹ

KannadaprabhaNewsNetwork | Published : Apr 10, 2025 1:02 AM

ಸಾರಾಂಶ

ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಆಗ್ರಹಿಸಿ ಬುಧವಾರ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಆಗ್ರಹಿಸಿ ಬುಧವಾರ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಜನವಿರೋಧಿ ನೀತಿ ತಾಳಿದೆ ಎಂದು ದೂರಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಜನಸಾಮಾನ್ಯರ ಮೇಲೆ ತೆರಿಗೆಯ ಅಧಿಕ ಹೊರೆ ಹೊರಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಜೀವನ ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್‍ ಮಾತನಾಡಿ, ಇದೀಗ ಕೇಂದ್ರ ಸರ್ಕಾರ ಮತ್ತೆ ಡಿಸೇಲ್ ಮೇಲೆ ಲೀಟರ್‌ ಗೆ 2 ರು. ಅಬಕಾರಿ ಶುಲ್ಕ ಹೆಚ್ಚಿಸಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರು. ಹೆಚ್ಚಿಸಿದೆ. ಸಿಎನ್‌ಜಿ ದರವನ್ನೂ ಪ್ರತಿ ಕೆಜಿ ಗೆ 1 ರು. ಹೆಚ್ಚಿಸಿದೆ. ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ದರ ಹೆಚ್ಚಳ ಮಾಡಿರುವುದು ಇತರೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದರು.

ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 2 ರು. ಹೆಚ್ಚಿಸುವ ಮತ್ತು ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 50 ರು. ಹೆಚ್ಚಿಸುವ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರವನ್ನು ಜಿಲ್ಲಾ ಯುವ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ ಮಾತನಾಡಿ, ಈ ಬೆಲೆ ಏರಿಕೆಗಳು ಈಗಾಗಲೇ ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಸಾಮಾನ್ಯ ಜನರು, ರೈತರು, ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರಿ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಉದ್ಯೋಗ ಸೃಷ್ಟಿ ಮಾಡುವುದನ್ನಾಗಲೀ, ಜನಸಾಮಾನ್ಯರ ಜೀವನ ಸರಳಗೊಳಿಸುವ ಕೆಲಸವನ್ನಾಗಲೀ ಮಾಡುತ್ತಿಲ್ಲ. ಬದಲಿಗೆ ಜನರಿಂದ ಮಿತಿಮೀರಿ ತೆರಿಗೆ ವಸೂಲು ಮಾಡುವ ಮೂಲಕ ಜನರನ್ನು ಸುಲಿಗೆ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಮಾಜಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾದ ಯಮುನಾ ರಂಗೇಗೌಡ್ರು ಮಾತನಾಡಿ, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕು. ಇಲ್ಲವೇ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಿಎಲ್‌ಡಿ ಬ್ಯಾಂಕ್‍ನ ಅಧ್ಯಕ್ಷರಾದ ವಿಜಯಕುಮಾರ್ (ದನಿ), ಕಾನೂನು ಸಲಹೆ ಗಾರರಾದ ಪೂರ್ಣೇಶ್, ಯುವ ಕಾಂಗ್ರೆಸ್ ವಿಧಾನಸಭಾ ಅಧ್ಯಕ್ಷ ಚರಣ್, ಪ್ರವೀಣ್‌, ಗಿರೀಶ್, ಸಕ್ಲೇನ್, ಪ್ರವೀಣ್, ಶಶಿಕುಮಾರ್, ಅಬ್ದುಲ್‌, ಸತ್ತರ್, ಮಲವಗೊಪ್ಪ ಶಿವು, ಆಕಾಶ್, ಅಶೋಕ್, ಕಾಶಿಫ್ ಬಾಲಾಜಿ, ಧನರಾಜ್, ನಿಖಿಲ್, ವಿಷ್ಣು ಕುಮಾರ್, ಅಕ್ಬರ್ ತೌಸೀಫ್ ಸೇರಿದಂತೆ ನೂರಾರು ಯುವ ಕಾಂಗ್ರೆಸ್‍ನ ಪದಾಧಿಕಾರಿಗಳು ಹಾಜರಿದ್ದರು.

Share this article