ಹಾವೇರಿ: ಕಳೆದ ಐದು ದಶಕಗಳಿಂದ ರಾಜಕಾರಣದಲ್ಲಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಹಿರಿಯ ಮುತ್ಸದ್ಧಿ ರಾಜಕಾರಣಿ ಎಚ್.ಕೆ. ಪಾಟೀಲ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಮೊದಲ ಹಂತದ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಬೇಕೆಂದು ಜಿಪಂ ಮಾಜಿ ಅಧ್ಯಕ್ಷ, ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ಎಚ್.ಕೆ. ಪಾಟೀಲ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಮೊದಲ ಹಂತದ ಕ್ಯಾಬಿನೆಟ್ ರಚನೆಯಲ್ಲಿ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕ ಎಚ್.ಕೆ. ಪಾಟೀಲ ಹೆಸರನ್ನು ಕೈಬಿಡಲಾಗಿದೆ. ಇದರಿಂದ ಲಕ್ಷಾಂತರ ಬೆಂಬಲಿಗರಿಗೆ ಅಸಮಾಧಾನವಾಗಿದೆ. ಶೀಘ್ರದಲ್ಲೆ ಮತ್ತೊಮ್ಮೆ ನಡೆಯುವ ಎರಡನೇ ಹಂತದ ಸಚಿವ ಸಂಪುಟ ರಚನೆ ವೇಳೆಯಲ್ಲಿ ಎಚ್.ಕೆ. ಪಾಟೀಲರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪರಿಗಣಿಸುವ ಮೂಲಕ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ನೀಲಕಂಠಪ್ಪ ಕುಸಗೂರ, ಬಸವೇಶಗೌಡ ಪಾಟೀಲ, ಶಿವಕುಮಾರ ತಾವರಗಿ, ಜಗದೀಶ ಬೇಟಗೇರಿ, ಪ್ರಸನ್ನ ಹಿರೇಮಠ, ಹೇಮಣ್ಣ ಮುನರೆಡ್ಡಿ, ನಾಗರಾಜ ಏರಿಮನಿ, ಎಂ.ಎಂ. ಮೈದೂರ, ಪ್ರಭುಗೌಡ ಬಿಷ್ಟನಗೌಡ್ರ, ಖಾಜಿ ವಕೀಲರು ಸೇರಿದಂತೆ ಎಚ್.ಕೆ. ಪಾಟೀಲ ಬೆಂಬಲಿಗರು, ಅಭಿಮಾನಿಗಳು ಇದ್ದರು. ಹಾವೇರಿಯ ಇಬ್ಬರಿಗೆ ಸಚಿವ ಸ್ಥಾನ ಕೊಡಿ: ರಾಜ್ಯದಲ್ಲಿ 2023ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾವೇರಿಯ ಯಾವ ಶಾಸಕರಿಗೂ ಸಚಿವ ಸ್ಥಾನ ಕೊಡಲಿಲ್ಲ. ಡಿಕೆಶಿ ನೇತೃತ್ವದ ಹೊಸ ಸರ್ಕಾರದಲ್ಲೂ ಮೊದಲ ಹಂತದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಕೊಟ್ಟಿಲ್ಲ. ಈಗ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಆರು ಜನ ಶಾಸಕರು, ಒಬ್ಬರು ಎಂಎಲ್‌ಸಿ ಇದ್ದಾರೆ. ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ ಹಾಗೂ ಸಲೀಂ ಅಹ್ಮದ್ ಅವರು ಮುಂಚೂಣಿಯಲ್ಲಿದ್ದು, ಕನಿಷ್ಠ ಇಬ್ಬರು ಶಾಸಕರಿಗಾದರೂ ಸಚಿವ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಎರಡು ಅವಧಿಯಲ್ಲಿ ಜಿಲ್ಲೆಗಾದ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿದರು.