ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಉಂಟಾಗಿರುವ ಅಂತರ ನಿವಾರಿಸಿ

ಯಲಬುರ್ಗಾ: ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಶಿಕ್ಷಣ ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮ ಜಾರಿಗೊಳಿಸಿದೆ. ಇದರ ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಶಿಕ್ಷಕರ ಶ್ರಮಿಸಬೇಕು ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶರಣಗೌಡ ಪೊಲೀಸ್ ಪಾಟೀಲ್ ಹೇಳಿದರು.

ಪಟ್ಟಣದ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ 2026-27ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿಭಾಷಾ ಶಾಲೆಗಳ 1ರಿಂದ 5ನೇ ತರಗತಿವರೆಗೆ ಸೇತುಬಂಧ ಉಪಕ್ರಮ ಪರಿಣಾಮಕಾರಿಯಾಗಿ ಬೋಧಿಸುವ ಶಿಕ್ಷಕರಿಗೆ ಒಂದು ದಿನದ ಪರಿವರ್ತನಾ ಅವಧಿಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಉಂಟಾಗಿರುವ ಅಂತರ ನಿವಾರಿಸಿ,ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಸೇತುಬಂಧ ಉಪಕ್ರಮ ಮಹತ್ವದ ಪಾತ್ರ ವಹಿಸಲಿದೆ.ಅವಳಿ ತಾಲೂಕಿನ ಶಿಕ್ಷಕರು ಗ್ರಾಮೀಣ ಭಾಗದ ಮಕ್ಕಳಿಗೆ ಪ್ರಗತಿಗೆ ಹೆಚ್ಚು ಶಿಕ್ಷಣ ಕಲಿಕೆಗೆ ವಿಶೇಷ ಬೋಧನೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ವಿ. ಧರಣಾ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಕರು ಹೊಸ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕು. ಜತೆಗ ಮಾತೃಭಾಷೆ ಹಾಗೂ ಇತರೆ ಭಾಷೆಗಳ ಮೂಲಕ ಬೋಧನೆ ಮಾಡಿದರೆ ಮಕ್ಕಳ ಕಲಿಕೆ ಸಹಕಾರಯಾಗಲಿದೆ.ಈ ತರಬೇತಿ ಕಾರ್ಯಾಗಾರವು ಶಿಕ್ಷಕರಲ್ಲಿ ಹೊಸ ಉತ್ಸಾಹ ಮೂಡಿಸಿ ಮಕ್ಕಳ ಕಲಿಕೆ ಮತ್ತಷ್ಟು ಪರಿಣಾಮಕಾರಿಯಾಗಿಸುವಲ್ಲಿ ನೆರವಾಗಲಿದೆ ಎಂದರು.

ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಂಚಾಲಕಿ ಮಂಜುಳಾ ಮಾತನಾಡಿ, ಮಕ್ಕಳಲ್ಲಿ ಓದು, ಬರಹ ಹಾಗೂ ಗಣಿತದ ಮೂಲಭೂತ ಕೌಶಲ್ಯ ಬಲಪಡಿಸಲು ದ್ವಿಭಾಷಾ ಬೋಧನೆ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ರಾಜಮಹಮ್ಮದ ಬಾಳಿಕಾಯಿ, ನಾಗರಾಜ ಕುರಿ, ಶಾಂತಪ್ಪ ಜುಮ್ಮನ್ನವರ, ಕಾಂತರಾಜ ಶೆಟ್ಟರ್, ಬಸನಗೌಡ ರಾಯನಗೌಡ,ರಾಜೇಸಾಬ್‌ ಮುಧೋಳ ಹಾಗೂ ಸಿದ್ದಲಿಂಗಪ್ಪ ಕುಂಬಾರ ಶಿಕ್ಷಕರಿಗೆ ಸೇತುಬಂಧ ಕಾರ್ಯಕ್ರಮದ ಉದ್ದೇಶ,ಅನುಷ್ಠಾನ ವಿಧಾನ, ಮಕ್ಕಳ ಕಲಿಕಾ ಮಟ್ಟ ಗುರುತಿಸುವಿಕೆ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.