ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚಿಸಲು ಆಗ್ರಹ

KannadaprabhaNewsNetwork |  
Published : Feb 04, 2025, 12:30 AM IST
3ಕೆಪಿಎಲ್27 ಕೊಪ್ಪಳ ನಗರದ ಸರ್ಕಾರಿ ಜಿಲ್ಲಾಸ್ಪತ್ರೆ, ಕಿಮ್ಸ್, ತಾಲ್ಲೂಕಾಸ್ಪತ್ರೆಗಳು ಸೇರಿದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ನೀಡುವಂತೆ ಆಗ್ರಹಿಸಿ ಎಸ್‌ಯುಸಿಐ(ಸಿ) ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು | Kannada Prabha

ಸಾರಾಂಶ

ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಒದಗಿಸಿ ವಿವಿಧ ವಿಭಾಗಗಳನ್ನು ಆರಂಭಿಸುವಂತೆ ಆಗ್ರಹಿಸಿ ಎಸ್‌ಯುಸಿಐ(ಸಿ) ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಸರ್ಕಾರಿ ಜಿಲ್ಲಾಸ್ಪತ್ರೆ, ಕಿಮ್ಸ್, ತಾಲೂಕಾಸ್ಪತ್ರೆಗಳು ಸೇರಿದಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವ ಬಡವರು ಸೂಕ್ತ ಚಿಕಿತ್ಸೆ ಸಿಗದೆ ಗೋಳಾಡುತ್ತಾರೆ. ಆದ್ದರಿಂದ ಮೂಲಸೌಕರ್ಯ ಒದಗಿಸಿ ವಿವಿಧ ವಿಭಾಗಗಳನ್ನು ಆರಂಭಿಸುವಂತೆ ಆಗ್ರಹಿಸಿ ಎಸ್‌ಯುಸಿಐ(ಸಿ) ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ಆಸ್ಪತ್ರೆಗಳಲ್ಲಿ ಉತ್ತಮ ಕೊಠಡಿ, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಕಟ್ಟಡ, ಅಗತ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಗಳಿಗೆ ಬೇಕಾದ ಆಧುನಿಕ ಯಂತ್ರೋಪಕರಣಗಳನ್ನು ಪೂರೈಸಬೇಕು. ಬಿಪಿಎಲ್ ಕಾರ್ಡ್ ಸೇರಿದಂತೆ ಜನಸಾಮಾನ್ಯರ ಮೇಲೆ ಹೇರಿರುವ ಶುಲ್ಕ ನೀತಿ ಕೂಡಲೇ ಹಿಂಪಡೆಯಬೇಕು. ನಿರ್ಗತಿಕರು, ಬಿಪಿಎಲ್ ಕಾರ್ಡ್‌ದಾರರು ಸೇರಿದಂತೆ ಎಲ್ಲ ಜನಸಾಮಾನ್ಯರಿಗೆ ನೋಂದಾವಣೆ ಚೀಟಿ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ವಿವಿಧ ತಪಾಸಣೆಗಳು ಮತ್ತು ಸರ್ಜರಿಗಳನ್ನು ಉಚಿತವಾಗಿ ಮಾಡಬೇಕು. ಜಿಲ್ಲಾಸ್ಪತ್ರೆ-ಕಿಮ್ಸ್ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳ ಔಷಧಾಲಯಗಳಲ್ಲಿ ಉತ್ತಮ ಗುಣಮಟ್ಟದ, ಎಲ್ಲಾ ಅವಶ್ಯಕ ಔಷಧಿ ಪೂರೈಸಿ, ಔಷಧಿಗಳ ಕೊರತೆ ನೀಗಿಸಿ, ರೋಗಿಗಳ ಚಿಕಿತ್ಸೆಗೆ ಸಂಪೂರ್ಣ ಔಷಧಿ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿತು.

ಜಿಲ್ಲಾಸ್ಪತ್ರೆ-ಕಿಮ್ಸ್ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತೆಗಳಲ್ಲಿ ಚೀಟಿ ಹಾಗೂ ಹಣ ಪಾವತಿ, ಔಷಧಿ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಿ, ರೋಗಿಗಳು ಉದ್ದನೆಯ ಪಾಳೆಯಲ್ಲಿ ಪರದಾಡುವುದನ್ನು ತಪ್ಪಿಸಬೇಕು. ಎಕ್ಸರೇ ವಿಭಾಗದಲ್ಲಿ ರೋಗಿಗಳ ಕೈಗೆ ಎಕ್ಸ್ ರೇ ಪ್ರತಿ ಕೊಡಬೇಕು. ಈ ಸರ್ಕಾರಿ ಆಸ್ಪತ್ರೆಗಳಿಗೆ ನುರಿತ-ತಜ್ಞ ವೈದ್ಯರ, ದಾದಿಯರ, ಮತ್ತಿತರ ವೈದ್ಯಕೀಯ ಸಿಬ್ಬಂದಿ ಹಾಗೂ ಡಿ ಗ್ರೂಪ್ ನೌಕರರೂ ಸೇರಿದಂತೆ ಅವಶ್ಯ ಮಾನವ ಸಂಪನ್ಮೂಲವನ್ನು ಖಾಯಂ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ಪ್ರಾಥಮಿಕ ಮತ್ತು ಮಾಧ್ಯಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಿಸಿ ಹಾಗೂ ಅಲ್ಲಿ ಗುಣಮಟ್ಟ ಕಾಪಾಡಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿ ಮತ್ತು ನವಜಾತ ಶಿಶುವಿನ ಸಾವು ತಡೆಗಟ್ಟಬೇಕು. ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಬೇಕು. ಕೇಂದ್ರ-ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಬೇಕು ಎಂದು ಆಗ್ರಹಿಸಲಾಯಿತು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ