ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಸುನ್ನಿ ಈದ್ಗಾ ಮೈದಾನವನ್ನು ಸಂರಕ್ಷಿಸಲು ಸಹಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಸಮಿತಿಯ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತಿಲಕ ನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಯಾಗಿದ್ದು, ಕರ್ನಾಟಕ ರಾಜ್ಯಪತ್ರದ ಅಧಿಸೂಚನೆ 1965ರ 288 ಅನ್ವಯ ವಕ್ಫ್ ಆಸ್ತಿ ಎಂದು ಆದೇಶವಾಗಿದೆ. ಮುನ್ಸಿಪಲ್ ಖಾತಾವನ್ನು ಹೊಂದಿರುತ್ತದೆ. ಈ ಮೈದಾನ ಈಗ ಗಾಂಧಿ ಬಜಾರಿನ ಮರ್ಕಜಿ ಸುನ್ನಿ ಜಾಮಿಯಾ ಮಸೀದಿಯವರ ಅಧೀನದಲ್ಲಿದೆ. ಇದರ ನಿರ್ವಹಣೆಯನ್ನು ಜಾಮಿಯಾ ಮಸಿದಿಯೇ ಮಾಡಿಕೊಂಡು ಬಂದಿದೆ. ಈ ಮೈದಾನದಲ್ಲಿ ಕೆಲವರು ಅನಧಿಕೃತ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಮತ್ತೆ ಕೆಲವು ಕಿಡಿಗೇಡಿಗಳು ರಾತ್ರಿ ವೇಳೆ ಹಾಗೂ ರಜಾ ದಿನಗಳಲ್ಲಿ ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಸ್ಥಳವನ್ನು ಸ್ವಚ್ಛಗೊಳಿಸಲು ಲಕ್ಷಾಂತರ ರುಪಾಯಿ ಹಣ ಕೂಡಾ ಖರ್ಚಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಗಿಲ್ಲ ಎಂದು ದೂರಿದರು.ಏ.1 ರಂದು ಕೆಲವರು ಈ ಜಾಗದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ವಕ್ಫ್ ಆಸ್ತಿಯನ್ನು ಸಾರ್ವಜನಿಕ ಆಸ್ತಿಯೆಂದು ತಪ್ಪು ಮಾಹಿತಿ ನೀಡಿ ಪ್ರಚೋಧನಕಾರಿ ಹೇಳಿಕೆಯ ಮೂಲಕ ಅಶಾಂತಿ ಹುಟ್ಟಿಸುತ್ತಿದ್ದಾರೆ. ಅಡಳಿತ ಸಮಿತಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಿದೆ. ಅಲ್ಲದೆ ಮೈದಾನದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯ ಮಾಡಲು ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ತೀರ್ಮಾನಿಸಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ವಕ್ಫ್ ಸಂಸ್ಥೆಗಳ ಟಾಸ್ಕ್ ಫೋರ್ಸ್‌ನ ಮುಖ್ಯಸ್ಥರಾಗಿದ್ದು, ಈ ಮೈದಾನದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆಯನ್ನು ಸ್ಥಗಿತಗೊಳಿಸಿ ಮೈದಾನವನ್ನು ಸಂರಕ್ಷಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು ಕಂಡು ಬಂದಿತು. ಪ್ರತಿಭಟನಾಕಾರರು ನಮ್ಮ ಜಾಗ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು. ನೂರಾರು ಮುಸ್ಲಿಮರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.