ಕುಷ್ಟಗಿ ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ಮಾದಿಗ ದಂಡೋರ ಸಮಿತಿಯ ತಾಲೂಕು ಘಟಕ ರಚಿಸಲಾಯಿತು. ಅಖಿಲ ಭಾರತ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಹುಸೇನಪ್ಪಸ್ವಾಮಿ ಇದ್ದರು.
ಕುಷ್ಟಗಿ: ಕೆಲವು ಸಮುದಾಯದವರು ಮಾದಿಗ ಜಾತಿ ಅಲ್ಲದೆ ಇದ್ದರೂ ಮಾದಿಗ ಎಂದು ಹೇಳಿಕೊಂಡು ಸರ್ಕಾರಿ ನೌಕರಿ ಸೇರಿದಂತೆ ಅನೇಕ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅದನ್ನು ಸರ್ಕಾರ ತಡೆಯಬೇಕು ಎಂದು ಅಖಿಲ ಭಾರತ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಹುಸೇನಪ್ಪಸ್ವಾಮಿ ಹೇಳಿದರು.
ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ನಡೆದ ಅಖಿಲ ಭಾರತ ಮಾದಿಗ ದಂಡೋರ ಸಮಿತಿಯ ತಾಲೂಕು ಘಟಕ ರಚನೆಯ ಆನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರ್ಕಾರ ಇತ್ತೀಚಿಗೆ ಒಳಮಿಸಲಾತಿ ಜಾರಿ ಮಾಡುತ್ತಿರುವುದು ಸಂತಸದ ಸಂಗತಿ. ಆದರೆ ಈ ಮೀಸಲಾತಿಯಲ್ಲಿ ಒಳಪಡುವ ಕೆಲವು ಸಮುದಾಯದವರು ಮಾದಿಗ ಎಂದು ಹೇಳಿಕೊಂಡು ಸೌಲಭ್ಯ ಪಡೆಯಲು ಮುಂದಾಗಿದ್ದು, ಅವರ ಮೂಲ ಜಾತಿ ಪರಿಶೀಲಿಸುವ ಮೂಲಕ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದರು.
ಒಳಮೀಸಲಾತಿಯಲ್ಲಿ ಮೂಲ ಮಾದಿಗರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸುವ ಸಲುವಾಗಿ ಡಿ. 11ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಲು ನಮ್ಮ ಸಮಾಜದವರು ಬೃಹತ್ ಪ್ರತಿಭಟನೆ ಮೂಲಕ ಸಿಎಂಗೆ ಮನವಿ ಮಾಡಲಾಗುತ್ತದೆ ಎಂದರು.
ಸರ್ಕಾರ ಕೈಗೊಳ್ಳುವ ಯೋಜನೆಗಳಲ್ಲಿ, ನೇಮಕಾತಿಗಳಲ್ಲಿ, ಶೈಕ್ಷಣಿಕವಾಗಿ ಒಳ ಮೀಸಲಾತಿಯಿಂದ ನೈಜ ಶೋಷಿತ ವರ್ಗದವರಾದ ಮಾದಿಗ, ಹೊಲೆಯರಿಗೆ ಆದ್ಯತೆ ನೀಡಬೇಕು, ಅತಿ ಹೆಚ್ಚು ಶೋಷಣೆಗೆ ಒಳಗಾದ ಶೋಷಿತ ಜನಾಂಗ ನಮ್ಮದು, ಹೀಗಾಗಿ ನಮಗೆ ಹೆಚ್ಚಿನ ನ್ಯಾಯ ನೀಡಬೇಕು, ಸರ್ಕಾರ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.