ಹಾವೇರಿ: ಇಲ್ಲಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಹಾಗೂ ಆಹಾರ ಸೇವಿಸಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವುದಕ್ಕೆ ಪ್ರಾಂಶುಪಾಲರೇ ಹೊಣೆ ಹೊರಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಎಂಜಿನಿಯರಿಂಗ್ ಕಾಲೇಜು ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ ಮಾತನಾಡಿ, ದೇವಗಿರಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯವಿಲ್ಲ. ವಿದ್ಯಾರ್ಥಿನಿಯರಿಗೆ ವಾರ್ಡನ್ ಹಾಗೂ ವಾಚ್ ಮ್ಯಾನ್ ಇಲ್ಲದೇ ಹಾಸ್ಟೆಲ್ ನಡೆಸುತ್ತಿರುವ ಕಾಲೇಜಿನ ಪ್ರಾಂಶುಪಾಲರೇ ಇದರ ನೇರ ಹೊಣೆಗಾರರಿರುತ್ತಾರೆ. ವಿದ್ಯಾರ್ಥಿನಿಯರಿಗೆ ಮೆಸ್‌ನಿಂದ ಊಟ ತರಿಸಿ ನೀಡುತ್ತಿದ್ದು, ಭಾನುವಾರ ವಿದ್ಯಾರ್ಥಿನಿಯರು ಮೆಸ್‌ನಿಂದ ತರಿಸಿರುವ ಆಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಕಾಲೇಜಿನ ಪ್ರಾಂಶುಪಾಲರು ನೇರ ಹೊಣೆಗಾರರಾಗಿರುತ್ತಾರೆ. ಇದರ ಬಗ್ಗೆ ಪ್ರಾಂಶುಪಾಲರನ್ನು ವಿಚಾರಿಸಿದರೆ ಉಡಾಫೆ ಉತ್ತರವನ್ನು ನೀಡುತ್ತಾರೆ. ಇಂತಹ ಪ್ರಾಂಶುಪಾಲರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.