ನವಲಗುಂದ: ಕನ್ಹೇರಿಮಠದ ಕಾಡಸಿದ್ದೇಶ್ವರ ಶ್ರೀಗಳ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ ಪ್ರವೇಶ ನಿಷೇಧ ಖಂಡಿಸಿ ಬಸವಾದಿ ಶರಣರ ಹಿಂದೂ ವೇದಿಕೆಯಿಂದ ಪಟ್ಟಣದಲ್ಲಿ ಸೋಮವಾರ ಚಕ್ಕಡಿಗಳೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕಾಡಸಿದ್ದೇಶ್ವರ ಸ್ವಾಮಿಗಳು ತಮ್ಮ ನೈಸರ್ಗಿಕ ಕೃಷಿಯ ಚಟುವಟಿಕೆಗಳ ಮೂಲಕ, ಜನೋಪಯೋಗಿ ಸೇವಾ ಚಟುವಟಿಕೆಗಳ ಮೂಲಕ, ಗುರುಕುಲ ಪದ್ಧತಿಯ ಶಿಕ್ಷಣದ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಸಮಾಜದ ನಿರ್ಮಾಣಕ್ಕೆ ನಿಸ್ವಾರ್ಥವಾಗಿ, ಬಸವತತ್ವಕ್ಕೆ ಪೂರಕವಾಗಿ ಹಗಲು-ರಾತ್ರಿ ದುಡಿಯುತ್ತಿರುವ ಸಂತರೊಬ್ಬರು '''' ದಂಗೆಗೆ ಕಾರಣವಾಗಲಿದ್ದಾರೆ'''''''' ಎಂಬ ಸರ್ಕಾರದ ಆರೋಪವೇ ನಮ್ಮೆಲ್ಲರನ್ನು ಗಾಬರಿಗೊಳಿಸಿದೆ ಎಂದರು.
ಗುರ್ಲಹೊಸೂರ ಚರಮುರ್ತೆಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರ ನಾಡು ಕಟ್ಟುವ ಕೆಲಸ ಮಾಡಬೇಕು. ಒಡೆಯುವ ನೇತೃತ್ವ ವಹಿಸಬಾರದು. ಸರ್ಕಾರ ನಾಡಿನ ಪರಂಪರೆ- ಸಂಸ್ಕೃತಿಗೆ ಗೌರವ ದಕ್ಕುವಂತೆ ಮಾಡಬೇಕು. ಅದರ ಮುಂದಾಳುಗಳಿಗೆ ಅವಮಾನ ಮಾಡುವುದಲ್ಲ ಎಂದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಕ್ಕಡಿಯೊಂದಿಗೆ ತಹಸೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡಸಿ ತಹಸೀಲ್ದಾರ್ ಸುಧೀರ ಸಾಹುಕಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವೀರಣ್ಣ ಪೂಜಾರ್, ವಿಜಯ ನಾಗಾವಿ ಜಯಶಂಕರ ವನ್ನೂರ್, ಮಲ್ಲಪ್ಪ ಮೆಣಸಿನಕಾಯಿ, ಶರಣಪ್ಪ ಹಕ್ಕರಕಿ, ವಿಜಯ ಬ್ಯಾಳಿ, ಬಸವರಾಜ ಕಾತರಕಿ, ಅಪ್ಪಣ್ಣ ಹಿರಗಣ್ಣವರ, ಮಂಜುನಾಥ ಬಿಜಾಪುರ, ರಾಜು ಸಿಸ್ವಿನಹಳ್ಳಿ, ಸೋಮಯ್ಯ ಪೂಜಾರ್, ಸಾಯಿಬಾಬಾ ಆನೆಗುಂದಿ, ಅಮರೇಶ ಕನಕೇರಿ, ನಿಂಗಪ್ಪ ಸುಳ್ಳದ ಸೇರಿದಂತೆ ಹಲವರಿದ್ದರು.