ಬೆಳೆ ವಿಮೆ ತುಂಬುವಲ್ಲಿನ ನ್ಯೂನತೆ ಸರಿಪಡಿಸಲು ಆಗ್ರಹ

KannadaprabhaNewsNetwork |  
Published : Jul 09, 2026, 01:00 AM IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ರೈತ ಸಂಘ ಹಾಗೂ ಹಸಿರು ಸೇನೆ ಹಾನಗಲ್ಲ ಘಟಕದಿಂದ ತಹಸೀಲ್ದಾರ್‌ ವಿಠ್ಠಲ ಚೌಗಲಾ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ರೈತರಿಗೆ ಪ್ರಸಕ್ತ ಸಾಲಿನ ಬೆಳೆವಿಮೆ ನೋಂದಣಿ ಮಾಡುವುದು, ವಿಮಾ ಪರಿಹಾರ ಪಡೆಯುವಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸುವಂತೆ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾನಗಲ್ಲ ಘಟಕದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಹಾನಗಲ್ಲ: ತಾಲೂಕಿನ ರೈತರಿಗೆ ಪ್ರಸಕ್ತ ಸಾಲಿನ ಬೆಳೆವಿಮೆ ನೋಂದಣಿ ಮಾಡುವುದು, ವಿಮಾ ಪರಿಹಾರ ಪಡೆಯುವಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾನಗಲ್ಲ ಘಟಕದಿಂದ ತಹಸೀಲ್ದಾರ್ ವಿಠ್ಠಲ ಚೌಗಲಾ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ಪ್ರಸಕ್ತ ಸಾಲಿನಲ್ಲಿ ಬೆಳೆವಿಮೆ ನೋಂದಣಿ ಮಾಡುವಲ್ಲಿ ರೈತರಿಗೆ ಸಾಲಗಾರರು, ಸಾಲಗಾರರಲ್ಲದವರು ಎಂದು ವಿಂಗಡಿಸಿ ಸ್ವಯಂ ದೃಢೀಕರಣ ಸಲ್ಲಿಸುವುದರಲ್ಲಿನ ಗೊಂದಲ ನಿವಾರಿಸಬೇಕು. 2026-27ನೇ ಸಾಲಿನ ಶುಂಠಿ, ಹಸಿಮೆಣಸಿನ ಕಾಯಿ, ಅಡಕೆ ಮತ್ತು ಮಾವು ಬೆಳೆಯ ವಿಮಾ ಪರಿಹಾರದ ಅವಧಿ ಮುಕ್ತಾಯವಾಗಿ ಒಂಭತ್ತು ತಿಂಗಳು ಕಳೆದರೂ ವಿಮಾ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡುವಲ್ಲಿ ನಿರ್ಲಕ್ಷ್ಯವಹಿಸಲಾಗಿದ್ದು, ಕೂಡಲೇ ಖಾತೆಗೆ ಜಮಾ ಮಾಡಬೇಕು. ಬೆಳೆ ವಿಮೆ ಕಂತು ತುಂಬುವ ಕುರಿತು ಅಂತಿಮ ದಿನಾಂಕವನ್ನು ನಿಗದಿ ಮಾಡಿರುವ ಹಾಗೇ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ದಿನಾಂಕ ಮಾಡಬೇಕು ಎಂದು ಕೋರಿದ್ದಾರೆ.

2019ನೇ ಸಾಲಿನಲ್ಲಿ ರೈತರಿಗೆ ಬೆಳೆಹಾನಿ ಪರಿಹಾರ ಪೂರೈಸುವಲ್ಲಿ ಕೆಲವು ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಸಹಾಯಕರ ತಪ್ಪಿನಿಂದ ಆಗಿರುವ ಸಮಸ್ಯೆ ಪೊಲೀಸ್ ತನಿಖೆಯಿಂದ ಇತ್ಯರ್ಥವಾಗಿದ್ದು, ಕೂಡಲೇ ಸಂಬಂಧಿಸಿದ ರೈತರ ಖಾತೆಗೆ ಪರಿಹಾರ ಜಮಾ ಮಾಡಬೇಕು. ತಾಲೂಕಿನಲ್ಲಿ ಬರಗಾಲದ ಛಾಯೆ ಮೂಡಿದ್ದು, ನೂರಾರು ಕೆರೆಗಳನ್ನು ತುಂಬಿಸಲು ಆಸರೆಯಾಗಿರುವ ಬಾಳಂಬೀಡ ಕೆರೆ ತುಂಬಿಸುವ ಯೋಜನೆ ಮೂಲಕ ವರದಾ ನದಿ ನೀರನ್ನು ಕೆರೆಗಳಿಗೆ ತುಂಬಿಸಬೇಕು. ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಕೂಡಲೇ ಬರಗಾಲ ಪೀಡಿತ ತಾಲೂಕೆಂದು ಘೋಷಿಸಿ ರೈತರಿಗೆ ಬರಹಾರ ನೀಡಬೇಕು ಎಂದು ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಆಗ್ರಹಿಸಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕಾಧ್ಯಕ್ಷ ಮರೀಗೌಡ ಪಾಟೀಲ, ಉಪಾಧ್ಯಕ್ಷ ಸೋಮಣ್ಣ ಜಡೆಗೊಂಡರ, ಕಾರ್ಯದರ್ಶಿ ರುದ್ರಪ್ಪ ಹಣ್ಣಿ, ಮಾಧ್ಯಮ ಪ್ರತಿನಿಧಿ ಶಿವಯೋಗಿ ಹೊಸಗೌಡ್ರ, ಮಾಲತೇಶ ಪರಪ್ಪನವರ ಉಪಸ್ಥಿತರಿದ್ದರು.ರೈತರಿಗೆ ದ್ರೋಹ: ಕಳೆದೊಂದು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ನೀರಾವರಿ ಯೋಜನೆಗಳ ನಿರ್ವಹಣೆಗೆ ಅನುದಾನದ ಕೊರತೆಯಿಲ್ಲ. ಅಗತ್ಯವಿದ್ದಲ್ಲಿ ಅನುದಾನ ಪಡೆದು ಕೆರೆ ತುಂಬಿಸುವ ಯೋಜನೆಯನ್ನು ಸಕಾಲದಲ್ಲಿ ಪ್ರಾರಂಭಿಸಲು ಸೂಚಿಸಲಾಗಿತ್ತು. ಆದರೂ ವರದಾ ನದಿಯಲ್ಲಿ ಸಾಕಷ್ಟು ನೀರಿನ ಹರಿವಿದ್ದರೂ ಯೋಜನೆ ಕಾರ್ಯಾರಂಭ ಮಾಡದಿರುವುದು ಅಧಿಕಾರಿಗಳು ರೈತರಿಗೆ ಮಾಡುತ್ತಿರುವುದ ದ್ರೋಹವಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ಮಳೆಯ ಅಭಾವದಿಂದಾಗಿ ರೈತ ವಲಯ ಅನುಭವಿಸುತ್ತಿರುವ ತೊಂದರೆ ಆಡಳಿತ ವರ್ಗದ ಗಮನಕ್ಕಿದ್ದರೂ ಕಾರ್ಯೋನ್ಮುಖರಾಗದಿರುವುದು ಖಂಡನೀಯ. ಇನ್ನೆರಡು ದಿನದಲ್ಲಿ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಾಲೂಕಾಧ್ಯಕ್ಷ ಮರೀಗೌಡ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್: ಶೇ.90 ಅರ್ಜಿ ವಿತರಣೆ
ಸಿಗದ ಸಮರ್ಪಕ ಪರಿಹಾರ: ಕಾಮಗಾರಿ ಸ್ಥಗಿತಗೊಳಿಸಿ ರೈತರ ಪ್ರತಿಭಟನೆ