ಕನ್ನಡಪ್ರಭ ವಾರ್ತೆ ಯಾದಗಿರಿ
ಈ ವೇಳೆ ಮಾತನಾಡಿದ ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ಗ್ರಾಮೀಣ ಜನತೆಯ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯನ್ನು ರದ್ದುಗೊಳಿಸಿ, ಉದ್ಯೋಗ ಖಾತ್ರಿ ಇಲ್ಲದ ವಿಬಿ ಜಿ ರಾಮ್ ಜಿಯನ್ನು ಜಾರಿಗೊಳಿಸುತ್ತಿರುವುದು ಗ್ರಾಮೀಣ ಬದುಕನ್ನೇ ಸರ್ವನಾಶ ಮಾಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ 12 ಕೋಟಿಗೂ ಅಧಿಕ ಜನರು ನರೇಗಾ ಯೋಜನೆ ಅಡಿಯಲ್ಲಿ ಬದುಕು ಸಾಗಿಸುವುದಲ್ಲದೆ, ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಕನಿಷ್ಠ ಆರ್ಥಿಕ ಬಲ ನೀಡಿತ್ತು. ಕೃಷಿ ಚಟುವಟಿಕೆ ಇರದ ಸಮಯದಲ್ಲಿ ಹಲವಾರು ಕ್ರಿಯಾ ಯೋಜನೆಗಳ ಮೂಲಕ ಗ್ರಾಮದ ಅಭಿವೃದ್ಧಿ ಕೆಲಸಗಳು ನಡೆಯುತ್ತಿತ್ತು. ಇದರಿಂದ ಹೆಚ್ಚು ಹಳ್ಳಿಗಳನ್ನೇ ಹೊಂದಿರುವ ನಮ್ಮ ದೇಶದಲ್ಲಿ ಗ್ರಾಮೀಣ ಬದುಕು, ತಳಮಟ್ಟದ ಆಡಳಿತವೂ ಖಾತ್ರಿಯಾಗಿತ್ತೆಂದು ಅವರು ವಿವರಿಸಿದರು. ಆದರೆ ಈಗ ಕೇಂದ್ರ ಸರ್ಕಾರ, ಎಲ್ಲ ಯೋಜನೆಗಳಿಗೆ ಕೇಂದ್ರೀಕೃತವಾಗಿ ಯೋಜನೆಗಳನ್ನು ರೂಪಿಸಿ ಗ್ರಾಮ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಹಣ ಬಿಡುಗಡೆ ಮಾಡುವುದು ಗ್ರಾಮೀಣ ಆಡಳಿತಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಆರೋಪಿಸಿದ್ದಾರೆ.ಇನ್ನು ಮುಂದೆ, ನಮೂನೆ 6ನ್ನು ತುಂಬಿ ಕೆಲಸ ಕೇಳುವ ಹಕ್ಕು ಇರದೆ, ಗ್ರಾಮೀಣ ಅಭಿವೃದ್ಧಿಯು ಕ್ರಿಯಾಯೋಜನೆಯಲ್ಲಿ ಇರದೆ ಗ್ರಾಮೀಣರ ಬದುಕು ದುಸ್ತರವಾಗುತ್ತದೆ. ವಿಪರ್ಯಾಸವೆಂದರೆ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಕೆಲಸ ಕೇಳುವ ಹಕ್ಕೂ ಇರದೆ. ನಿರುದ್ಯೋಗ, ವಲಸೆ ಹೋಗುವ ಬದುಕೇ ಕೂಲಿ ಕಾರ್ಮಿಕರಿಗೆ ಖಾತ್ರಿಯಾಗುತ್ತದೆ. ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರ ಹಿತಕ್ಕೆ ವಿರುದ್ಧವಾಗಿರುವ ವಿಬಿ ಜಿ ರಾಮ್ ಜಿ ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು.
ವಾರ್ಷಿಕ 200 ದಿನಗಳ ಕೂಲಿಯನ್ನು ಹಾಗೂ 600 ರು. ವೇತನವನ್ನು ನಿಗದಿಪಡಿಸಬೇಕು. ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಭೀಮರಡ್ಡಿ ಹಿರೇಬಾನರ್, ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಬಡಿಗೇರ, ಜಮಾಲ್ ಸಾಬ್, ಜಿಲ್ಲಾ ಸಹ ಕಾರ್ಯದರ್ಶಿ ಸುಭಾಷ್ಚಂದ್ರ ಬಾವನೋರ್, ಜಿಲ್ಲಾ ಸಮಿತಿ ಸದಸ್ಯ ರಾಜು ಹಿಮ್ಲಾಪುರ ಹಾಗೂ ಮಲ್ಲಪ್ಪ, ಸಿದ್ದಪ್ಪ, ಶೇಖರ್, ಶರಣಪ್ಪ, ಬಸಪ್ಪ, ತರಭಿ, ಸುಶೀಲಮ್ಮ, ರುದ್ರಮ್ಮ, ಭೀಮಮ್ಮ ಅಭಿದಾ ಬೇಗಂ ಸೇರಿದಂತೆ ಇತರರಿದ್ದರು.