ಕನ್ನಡ ಪ್ರಭ ವಾರ್ತೆ ಹುಳಿಯಾರು
ಬೆಂಬಲ ಬೆಲೆಯಡಿ ಸರ್ಕಾರ ಖರೀದಿಸಿರುವ ರಾಗಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ರೈತರು ತಮ್ಮ ಜೀವನ ನಿರ್ವಹಣೆಗೆ ಹಾಗೂ ವ್ಯವಸಾಯದ ಕಾರ್ಯಗಳಿಗೆ ಮಾಡಿರುವ ಸಾಲಗಳನ್ನು ತೀರಿಸಲು ತಾವು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿ ಸರ್ಕಾರಕ್ಕೆ ಮಾರಿದರೂ ಸಹ ನಿಗದಿತ ಸಮಯಕ್ಕೆ ಹಣ ಸಿಗದೆ ಬ್ಯಾಂಕ್, ಫೈನಾನ್ಸ್, ಸಹಕಾರ ಸಂಘಗಳು ವಿಧಿಸುವ ಅಧಿಕ ಪ್ರಮಾಣದ ಬಡ್ಡಿಯನ್ನು ಹಾಗೂ ಕಿರುಕುಳವನ್ನು ಅನುಭವಿಸುತ್ತಿದ್ದು ಈ ಕೂಡಲೇ ರೈತರಿಗೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ರೈತ ಸಂಘದ ಸದಸ್ಯರು ಸರ್ಕಾರಕ್ಕೆಎಚ್ಚರಿಕೆ ನೀಡಿದರು. ರಾಜ್ಯ ರೈತ ಸಂಘದ ಸದಸ್ಯರುಗಳು ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಎಪಿಎಂಸಿ ರಾಗಿ ಖರೀದಿ ಕೇಂದ್ರದ ವರೆಗೂ ಜಾಥಾ ನಡೆಸಿ ರಾಜ್ಯ ಸರ್ಕಾರ ವಿರುದ್ಧ ವಿರುದ್ಧ ಘೋಷಣೆ ಕೂಗಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರುಗಳು, ರೈತರು ಮಾಡುವುದು ಕೂಲಿ ಬೇಡುವುದು ಕೂಲಿ ಎಂಬ ಮಾತು ಅಕ್ಷರ ಸಹ ಸತ್ಯವಾಗಿದೆ. ರೈತ ಕೃಷಿ ಚಟುವಟಿಕೆಗಳಿಗೆ ಸಂಘ ಸಂಸ್ಥೆ ಬ್ಯಾಂಕ್ ಗಳಿಂದ ಸಾಲ ಪಡೆದು ಬೆಳೆ ತೆಗೆದು ಅದನ್ನು ಮಾರಿದರೂ ಸಹ ಸರಿಯಾದ ಸಮಯಕ್ಕೆ ಹಣ ಸಿಗದೇ ಬ್ಯಾಂಕು ಸಂಸ್ಥೆಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಯ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಗೊತ್ತಿದ್ದರೂ ಸಹ ಸರ್ಕಾರ ರೈತರಿಂದ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಿದ ರಾಗಿಗೆ 20 ದಿನ ಕಳೆದರು ಹಣ ನೀಡದ ಅವರ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು . ಯುಗಾದಿ ಹತ್ತಿರ ಇದ್ದು ಬಟ್ಟೆ ಬರೆ ಕೊಳ್ಳಲು ಹಣವಿಲ್ಲದೆ ಕಂಗಾಲಾಗಿದ್ದಾನೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಂಡು ಈ ಕೂಡಲೇ ಹಣ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ರಾಜ್ಯ ರೈತ ಸಂಘ ಉಗ್ರ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಧರಣಿ ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ಅವರು ಮಾತನಾಡಿ ನಿಮ್ಮ ಮನವಿಯನ್ನು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ನಿಮಗೆ ಆಗಿರುವ ತೊಂದರೆಯನ್ನು ಸರಿಪಡಿಸಲಾಗುವುದು ಎಂದರು. ಈ ವೇಳೆ ರಾಜ್ಯ ರೈತ ಸಂಘದ ತಮಡಿಹಳ್ಳಿ ಮಲ್ಲಿಕಾರ್ಜುನಯ್ಯ, ಜಿಲ್ಲಾಧ್ಯಕ್ಷ ಧನಂಜಯ,ಮರುಳಯ್ಯ, ಲಕ್ಷ್ಮೀನರಸಿಂಹಯ್ಯ,ದಾಸಪ್ಪ,ರಾಜಣ್ಣ, ಹಾಗೂ ಮಹಿಳಾ ರೈತ ಸಂಘದ ಸದಸ್ಯರುಗಳು ಇದ್ದರು.