ಗದಗ: ಮಾಜಿ ದೇವದಾಸಿಯರ ಕುಟುಂಬದ ಗಣತಿಯಲ್ಲಿನ ತೊಡಕುಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ರಾಜ್ಯ ದೇವದಾಸಿ ಮಹಿಳೆಯರ, ಮಕ್ಕಳ ಹೋರಾಟ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷೆ ಹುಲಿಗೆಮ್ಮ ಮಾತಿನ ಮಾತನಾಡಿ, ಹಲವು ದಶಕಗಳ ಹೋರಾಟವನ್ನು ಪರಿಗಣಿಸಿ ಸರ್ಕಾರ ದೇವದಾಸಿ ನಿಷೇಧ ಮಸೂದೆ- 2025ನ್ನು ಅಂಗೀಕರಿಸಿದೆ. ಅಲ್ಲದೇ ಮಾಜಿ ದೇವದಾಸಿಯರ 3 ತಲೆಮಾರುಗಳ ಕುಟುಂಬದವರ ಸಮೀಕ್ಷೆಗೆ ಕ್ರಮ ಕೈಗೊಂಡಿದೆ. ಈಗ ನಡೆಯುತ್ತಿರುವ ಆನ್‌ಲೈನ್ ಸಮೀಕ್ಷೆಯು ಹಲವಾರು ಕೊರತೆ ಹಾಗೂ ತೊಂದರೆಗಳಿಂದ ಕೂಡಿದೆ.
ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕವೂ ಮಾಹಿತಿ ಸಂಗ್ರಹಿಸಿ ವಿವರವನ್ನು ಆನ್‌ಲೈನ್ ಗಣತಿಗೆ ಕ್ರಮವಹಿಸಬೇಕು. ಆನ್‌ಲೈನ್ ಗಣತಿ ಸಂದರ್ಭದಲ್ಲಿ ಬಂದ ಮಹಿಳೆಯರನ್ನು ಗೌರವ ಹಾಗೂ ಉಪಾಹಾರ, ನೀರು ಮುಂತಾದ ವ್ಯವಸ್ಥೆ ಮಾಡಬೇಕು ಎಂದರು.
ಆನ್‌ಲೈನ್ ಗಣತಿಯನ್ನು ನೆಲ ಮಹಡಿಯಲ್ಲೆ ಅಗತ್ಯ ಹೆಚ್ಚುವರಿ ಪರಿಕರ ಮತ್ತು ಸಿಬ್ಬಂದಿಯೊಂದಿಗೆ ನಡೆಸಬೇಕು. ಗಣತಿಯ ಅವಧಿಯನ್ನು ಪೂರ್ಣವಾಗುವವರೆಗೂ ವಿಸ್ತರಿಸಬೇಕು. ಎಲ್ಲ ಮಾಜಿ ದೇವದಾಸಿಯರು, ಅವರ ಕುಟುಂಬದ ಮೂರು ತಲೆಮಾರಿಗೂ ಅನ್ವಯಿಸುವಂತೆ ಗಣತಿಗೆ ಕ್ರಮವಹಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.ಯಲ್ಲವ್ವ ಸೊನ್ನದ, ಗೌರವ್ವ ಹಿರೇಮನಿ, ಸುನಂದವ್ವ ಬುದೂರ, ಕನಕವ್ವ ಮಾದರ, ರೇಣವ್ವ ಮಾದರ, ಶಿವವ್ವ ಮಾದರ, ಮದರವ್ವ ಮಾದರ, ರೋಣವ್ವ ಮಾದರ, ದುರಗವ್ವ ಮಾದರ, ಗಂಗವ್ವ ಮಾದರ, ದಂಡಕ್ಕ ಪೂಜಾರ, ತಾರಾಬಾಯಿ ದೊಡ್ಡಮನಿ, ಹುಲಿಗೆವ್ವ ಅಸುಂಡಿ, ಗಾಳೆವ್ವ ಅಸುಂಡಿ, ಲಕ್ಷ್ಮವ್ವ ಸನಾದಿ, ಕಿಟ್ಟೆವ್ವ ಮಾದರ ಇದ್ದರು.