ಮಂಗಳೂರು: ಎಲ್‌ಟಿ (ಲೋ ಟೆನ್ಶನ್) ವಿದ್ಯುತ್ ಪೂರೈಕೆಯಡಿ 150 ಕಿ.ವ್ಯಾ.ವರೆಗಿನ ಸಂರ್ಪಕಗಳಿಗೆ ಗ್ರಾಹಕರೇ ಸ್ವಯಂ-ಪ್ರಮಾಣೀಕರಣ ಮಾಡಲು ಅನುಮತಿಸುವ ಅವಕಾಶವನ್ನು ಕಲ್ಪಿಸುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕರಡು ನಿಯಮಾವಳಿ ಕೈಬಿಡುವಂತೆ ವಿದ್ಯುತ್ ಗುತ್ತಿಗೆದಾರರ ಸಂಘಟನೆಗಳು ಆಗ್ರಹಿಸಿವೆ.
ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಸಲ್ಲಿಸುವ ಸಮಾಪನ ವರದಿಯನ್ನು (ಕಂಪ್ಲೀಷನ್ ರಿಪೋರ್ಟ್) ಸಲ್ಲಿಕೆಯ ವ್ಯವಸ್ಥೆ ರದ್ದುಗೊಳಿಸುವುದರಿಂದ ಸಾರ್ವಜನಿಕರ ವಿದ್ಯುತ್ ಸುರಕ್ಷತೆಗೆ ಧಕ್ಕೆಯಾಗುವುದಲ್ಲದೆ, ಈ ವೃತ್ತಿಯನ್ನು ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ ಎಂಬ ಆತಂಕ ಗುತ್ತಿಗೆದಾರ ಸಂಘಟನೆಗಳ ಪ್ರತಿನಿಧಿಗಳಿಂದ ವ್ಯಕ್ತವಾಯಿತು.ವಿದ್ಯುತ್ ಗುತ್ತಿಗೆದಾರರು ವಿದ್ಯುತ್ ಸಂಪರ್ಕ ನೀಡುವ ಕುರಿತಂತೆ ಸಾಕಷ್ಟು ಅನುಭವ ಹೊಂದಿರುತ್ತಾರೆ. ಅರ್ಥಿಂಗ್, ಆಂಫ್ಸ್, ವೋಲ್ಟ್ ಮತ್ತು ಇತರ ವಿದ್ಯುತ್ ಪೂರಕ ವ್ಯವಸ್ಥೆಗಳನ್ನು ಪರಿಶೀಲಿಸಲು ಅಗತ್ಯವಿರುವ ಉಪಕರಣಗಳನ್ನು ಹೊಂದಿದ್ದಾರೆ. ಆದರೆ ಸಾಮಾನ್ಯ ವ್ಯಕ್ತಿಗಳು ಸುರಕ್ಷತೆಯನ್ನು ಪ್ರಮಾಣೀಕರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಾಗದು. ಈ ಹೊಸ ನಿಬಂಧನೆ ರಾಜ್ಯದಲ್ಲಿ ಲಕ್ಷಾಂತರ ವಿದ್ಯುತ್ ಗುತ್ತಿಗೆದಾರರ ಉದ್ಯೋಗವನ್ನೂ ಕಸಿದುಕೊಳ್ಳುತ್ತದೆ ಎಂದು ಗುತ್ತಿಗೆದಾರರು ಆಕ್ಷೇಪ ಸಲ್ಲಿಸಿದರು.ಪ್ರಸಕ್ತ ವಿದ್ಯುತ್ ಸಮಾಪನ ವರದಿಯಲ್ಲಿ ಸಂಬಂಧಪಟ್ಟ ಎಂಜಿನಿಯರ್, ಗ್ರಾಹಕ ಹಾಗೂ ವಿದ್ಯುತ್ ಗುತ್ತಿಗೆದಾರರು ಸಹಿ ಮಾಡುತ್ತಾರೆ. ಮನೆಯ ವಿದ್ಯುತ್ ಸಂಪರ್ಕದಲ್ಲಿ ಎಷ್ಟು ಲೈಟಿಂಗ್ ಪಾಯಿಂಟ್‌ಗಳು, ಪ್ಲಗ್ ಪಾಯಿಂಟ್‌ಗಳು, ಸಾಕೆಟ್‌ಗಳು ಹಾಗೂ ಇತರ ಉಪಕರಣಗಳನ್ನು ಅಳವಡಿಸಲಾಗಿದೆ ಎಂಬ ವಿವರಗಳನ್ನು ವರದಿಯಲ್ಲಿ ದಾಖಲಿಸಲಾಗುತ್ತದೆ. ಅನುಭವಿ ವೈರ್‌ಮನ್‌ಗಳು, ಮೇಲ್ವಿಚಾರಕರು ಮತ್ತು ಗುತ್ತಿಗೆದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂದು ಗುತ್ತಿಗೆದಾರರು ತಿಳಿಸಿದರು.ಕರಡು ವಿದ್ಯುತ್ ನಿಯಮಾವಳಿಯ ಕೆಲ ಪ್ರಸ್ತಾವಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ, ಎಲ್‌ಟಿ-5/ ಎಚ್‌ಟಿ-2ಎ/ ಕೈಗಾರಿಕಾ ಲೇಔಟ್‌ಗಳು, ಎಂಎಸ್‌ಎಂಇ ಶೆಡ್‌ಗಳು, ಗೋದಾಮುಗಳು ಮತ್ತು ಪ್ಲಾಸ್ಟಿಕ್ ಪಾರ್ಕ್ಘಟಕಗಳ ಅಡಿಯಲ್ಲಿ ಕೈಗಾರಿಕಾ ಕಟ್ಟಡಗಳನ್ನು ಕಡ್ಡಾಯ ಇವಿ ಚಾರ್ಜಿಂಗ್ ಷರತ್ತಿನಿಂದ ಸಂಪೂರ್ಣವಾಗಿ ವಿನಾಯಿತಿ ನೀಡಬೇಕು, ಗ್ರಾಹಕರು ಕಳೆದ 12 ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಿದ್ದರೆ ಯಾವುದೇ ಹೆಚ್ಚುವರಿ ಭದ್ರತಾ ಠೇವಣಿ ಕೇಳಬಾರದು, ಪಂಪ್‌ಸೆಟ್‌ಗಳಿಗೆ ಎನ್‌ಒಸಿ ಕೇಳಬಾರದು ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿದರು.
ಪರಿಷ್ಕೃತ ಕರಡು ಪ್ರಕಟಿಸಿ:ಸಾರ್ವಜನಿಕ ವಿಚಾರಣೆಯಲ್ಲಿ ಸ್ವೀಕರಿಸಿದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಪರಿಷ್ಕೃತ ಕರಡನ್ನು ಪ್ರಕಟಿಸಬೇಕು. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ವಿಚಾರಣೆಗಳಲ್ಲಿ ಮಂಡಿಸಲಾದ ಅಭಿಪ್ರಾಯಗಳು ಎಲ್ಲರಿಗೂ ತಿಳಿಯುವುದಿಲ್ಲ. ಹೀಗಾಗಿ ಎಲ್ಲ ಸಲಹೆಗಳನ್ನು ಕ್ರೋಡೀಕರಿಸಿ ಪರಿಷ್ಕೃತ ಕರಡು ಪ್ರಕಟಿಸಿದರೆ ಹೆಚ್ಚು ಅರ್ಥಪೂರ್ಣ ಅಭಿಪ್ರಾಯಗಳನ್ನು ಪಡೆಯಬಹುದು ಎಂದು ಸಲಹೆ ವ್ಯಕ್ತವಾಯಿತು.ಆಯೋಗದ ಸದಸ್ಯರಾದ ಎಚ್.ಕೆ.ಜಗದೀಶ್, ಜಾವೇದ್ ಅಖ್ತರ್ ಇದ್ದರು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕರಡು ನಿಯಮಗಳ ಕುರಿತ ಸಾರ್ವಜನಿಕ ವಿಚಾರಣೆಯನ್ನು ಮೈಸೂರು, ಬೆಂಗಳೂರು, ದಾವಣಗೆರೆ ಮತ್ತು ಬೀದರ್‌ನಲ್ಲಿ ಇನ್ನಷ್ಟೇ ನಡೆಸಬೇಕಿದೆ. ಈಗಾಗಲೇ ಬೆಳಗಾವಿ, ಹುಬ್ಬಳ್ಳಿ, ಶಿರಸಿ, ಕಲಬುರಗಿ, ಬಳ್ಳಾರಿ ಮತ್ತು ಮಂಗಳೂರಿನಲ್ಲಿ ವಿಚಾರಣೆ ಪೂರ್ಣಗೊಂಡಿದೆ. ಕೊನೆಯ ವಿಚಾರಣೆ ನ.4ರಂದು ಬೀದರ್‌ನಲ್ಲಿ ನಡೆಯಲಿದೆ. ಬಳಿಕ ಆಯೋಗ ಅಂತಿಮ ನಿರ್ಧಾರ ಪ್ರಕಟಿಸಲು ಕನಿಷ್ಠ ಒಂದು ತಿಂಗಳ ಅಗತ್ಯವಿದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ್ ತಿಳಿಸಿದರು.