ಕಂಪ್ಲಿ: ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಹಾಗೂ ಸ್ಕ್ಯಾನಿಂಗ್ ಶುಲ್ಕದ ವಿವರ ಒಳಗೊಂಡ ಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ನೋಂದಣಿ ಕಾರ್ಯಕ್ಕಾಗಿ ಕಚೇರಿಗೆ ಬರುವ ಸಾರ್ವಜನಿಕರಿಂದ ಸರ್ಕಾರ ನಿಗದಿಪಡಿಸಿರುವ ಶುಲ್ಕ ಪಡೆಯಬೇಕು. ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಶಾಸಕ ಜೆ.ಎನ್. ಗಣೇಶ್ ಎಚ್ಚರಿಕೆ ನೀಡಿದರು.
ಸಾರ್ವಜನಿಕರು ತಮ್ಮ ಜಮೀನು, ಮನೆ ಹಾಗೂ ಇತರೆ ಆಸ್ತಿಗಳ ನೋಂದಣಿಗಾಗಿ ಕಚೇರಿಗೆ ಬರುತ್ತಾರೆ. ಅವರಿಗೆ ಸರ್ಕಾರದ ನಿಯಮಗಳ ಪ್ರಕಾರ ಎಷ್ಟು ಶುಲ್ಕ ಪಾವತಿಸಬೇಕು ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದಿರಬೇಕು. ಈ ಉದ್ದೇಶದಿಂದ ಕಚೇರಿಯ ಪ್ರಮುಖ ಸ್ಥಳದಲ್ಲಿ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಹಾಗೂ ಸ್ಕ್ಯಾನಿಂಗ್ ಶುಲ್ಕದ ವಿವರ ಪ್ರದರ್ಶಿಸಬೇಕು ಎಂದು ಸೂಚಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಪಾರದರ್ಶಕವಾಗಿ ನಡೆಯಬೇಕು. ಯಾವ ಕೆಲಸಕ್ಕೆ ಎಷ್ಟು ಶುಲ್ಕ ಪಾವತಿಸಬೇಕು ಎಂಬ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ದೊರೆಯುವಂತಿರಬೇಕು. ಶುಲ್ಕದ ವಿವರ ಪ್ರದರ್ಶಿಸುವುದರಿಂದ ಸಾರ್ವಜನಿಕರಲ್ಲಿ ಗೊಂದಲ ನಿವಾರಣೆಯಾಗುವುದರ ಜತೆಗೆ ಅನಗತ್ಯ ಹಣ ವಸೂಲಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರೊಂದಿಗೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ತಿಳಿಸಿದರು.ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಹಣ ಸಾರ್ವಜನಿಕರು ಯಾರಿಗೂ ನೀಡಬಾರದು. ಅಧಿಕಾರಿಗಳು ಅಥವಾ ಪತ್ರ ಬರಹಗಾರರು ನೋಂದಣಿ ಕಾರ್ಯದ ಹೆಸರಿನಲ್ಲಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟರೆ ಅದನ್ನು ಪ್ರಶ್ನಿಸಬೇಕು. ಇಂತಹ ಘಟನೆ ನಡೆದರೆ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂದು ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರಿಗೆ ಶಾಸಕ ಜೆ.ಎನ್. ಗಣೇಶ್ ಸಲಹೆ ನೀಡಿದರು.