ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಆಗ್ರಹ

KannadaprabhaNewsNetwork | Published : Mar 17, 2025 12:32 AM

ಸಾರಾಂಶ

ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಆರ್‌ಎಸ್ ಪಕ್ಷದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಭಾಗವಹಿಸಿದ್ದ ಕಾರ್ಯಕರ್ತರು ಸರ್ಕಾರ ಹಾಗೂ ಜಿಲ್ಲಾಡಳಿತದ ನಡೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮುಖಂಡ ಜ್ಞಾನ ಸಿಂಧು ಸ್ವಾಮಿ ಜಿಲ್ಲೆಯ ಜನತೆಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಮಣ್ಣು, ಪ್ರಕೃತಿಯ ಆಸರೆ ಬೇಕೆ ಬೇಕು. ತುಮಕೂರಿನವರು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ಆದರೆ ಇಲ್ಲಿನ ಭೂಮಿಯನ್ನು ಭ್ರಷ್ಟರಿಗೆ ಹಾಳು ಮಾಡಲು ಬಿಟ್ಟು ನಾವು ಮಂಗಳ ಗ್ರಹಕ್ಕೆ ಹೋಗುವುದಿಲ್ಲ ಜಿಲ್ಲೆಯ ಜನತೆಗೆ ಬದುಕಲು ಯೋಗ್ಯ ಪರಿಸರ ಅಗತ್ಯ. ಜಿಲ್ಲೆಯಲ್ಲಿರುವ ಪರಿಸರವನ್ನು ಬೇರೆ ಕಡೆಯಿಂದ ಬಂದ ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಮಲೀನ ಮಾಡುವುದಲ್ಲದೇ ನೆಲದ ಮಕ್ಕಳಿಗೆ ಮಣ್ಣು ಮುಕ್ಕಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಲಂಚಬಾಕತನ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಮನಸ್ಸಿಗೆ ಬಂದ ಕಡೆಗಳಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ. ಎಲ್ಲಿ ಗಣಿಗಾರಿಕೆ ನಡೆಸಬೇಕು ಎಂದು ಪ್ರಸ್ತಾವ ಬಂದಾಗ ಆ ಪ್ರದೇಶದ ಸುತ್ತಮುತ್ತಲಿನ ಜನರನ್ನು ಖುದ್ದಾಗಿ ಭೇಟಿ ಮಾಡಿ ಇಲ್ಲಿ ಆರಂಭ ಮಾಡಬಹುದೇ ಎಂಬುವುದನ್ನು ಪಡೆದು, ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕು ಎಂದರು.

ಕೆ ಆರ್ ಎಸ್ ಪಕ್ಷದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಕುಣಿಗಲ್, ಜಿಲ್ಲಾ ಉಪಾಧ್ಯಕ್ಷ ಪ್ರದೀಪ್ ಕುಮಾರ್, ರಾಜ್ಯ ಯುವ ಘಟಕದ ಅಧ್ಯಕ್ಷೆ ಜನನಿ ವತ್ಸಲ ,ರಾಜ್ಯ ಎಸ್ ಸಿ, ಎಸ್ ಟಿ ಘಟಕದ ಕಾರ್ಯದರ್ಶಿ ಚೆನ್ನಯ್ಯ ಹಾಗೂ ನರಸಿಂಹರಾಜು ಸಿ.ಎನ್ ಉಪಸ್ಥಿತರಿದ್ದರು.

Share this article