ಧಾರವಾಡ: ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಆಗ್ರಹಿಸಿ ಮಂಗಳವಾರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಮರಳು ಸಂಗ್ರಹಿಸಿಟ್ಟಿರುವುದು ಪತ್ತೆಯಾಗುತ್ತದೆ. ಸಂಗ್ರಹಿಸಿಟ್ಟವರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಹಳ್ಳ ಹಾಗೂ ನದಿ ಒಡಲಲ್ಲಿರುವ ಮರಳನ್ನು ಖದೀಮರು ಕೊಳ್ಳೆ ಹೊಡೆಯುತ್ತಿದ್ದರೂ, ಅಧಿಕಾರಿಗಳು ಮತ್ತು ಗಣಿ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಸರ್ಕಾರದ ವಿರುದ್ದ ಹಾಗೂ ಅಕ್ರಮ ಮರಳು ದಂದೆ ಮಾಡುವವರ ವಿರುದ್ದ ಘೋಷಣೆ ಕೂಗುತ್ತ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಭಯವಿಲ್ಲದೇ ಅಕ್ರಮ ಮರಳು ಸಾಗಣೆಯನ್ನು ಹಗಲಿರುಳು ನಡೆಸಲಾಗುತ್ತಿದೆ. ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಹಾಗೂ ಅಕ್ರಮ ಗಣಿಗಾರಿಕೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ, ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ, ಪ್ರವೀಣ ಗಾಯಕವಾಡ, ಗುರುಸಿದ್ದಪ್ಪ ಅಂಗಡಿ, ಬಾಲಚಂದ್ರ ಲೂತಿಮಠ, ಅಮಿತ್ ನರವಟ್ಟೆ, ಮಾಬೂಲಿ ಶೇಖ್, ರಾಜೇಶ ಢವಳೆ, ಮಂಜುನಾಥ ಭೂವಿ ಇದ್ದರು.