ಕಾರವಾರ: ಮೀನುಗಾರರ ಅಸ್ತಿತ್ವಕ್ಕೆ ಮಾರಕವಾದ ಬಂದರುಗಳ ನಿರ್ಮಾಣವನ್ನು ಕೈಬಿಡಬೇಕು ಎಂದು ರಾಷ್ಟ್ರೀಯ ಫಿಶ್ ವರ್ಕರ್ಸ್ ಫೋರಂ ಅಧ್ಯಕ್ಷ ರಾಮಕೃಷ್ಣ ತಾಂಡೇಲ್ ಆಗ್ರಹಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೀನುಗಾರರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿ ಆಗಿ, ಬಂದರು ನಿರ್ಮಾಣದಿಂದ ಆಗುವ ಲೋಪದೋಷಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ದೇಶದ 9 ಕರಾವಳಿ ರಾಜ್ಯಗಳು, ಐದು ನಗರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಫಿಶ್ ವರ್ಕರ್ಸ್ ಫೋರಂ ಬಂದರುಗಳ ನಿರ್ಮಾಣ ವಿರೋಧಿಸಿ ಹೋರಾಟ ನಡೆಸುತ್ತಿದೆ. ಜಿಲ್ಲೆಯ ಕೇಣಿ, ಕಾಸರಕೋಡು ಬಂದರು ವಿರೋಧಿಸಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ವಿವರಿಸಿದರು.ಬಂದರುಗಳಿಂದ ಮೀನುಗಾರರು, ಮೀನುಗಾರಿಕೆ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಸಂಬಂಧಪಟ್ಟವರ ಜೊತೆಗೆ ಮಾತುಕತೆ ನಡೆಸಿ, ಸಭೆ ಕರೆಯುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 15 ದಿನಗಳಲ್ಲಿ ಸ್ಪಂದನೆ ದೊರೆಯದೇ ಇದ್ದರೆ, ಮಾನ್ಸೂನ್ ಸಂಸತ್ ಕಲಾಪದ ವೇಳೆ ಜಂತರ್ ಮಂತರ್ ಗೆ ತೆರಳಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಫಿಶ್ ವರ್ಕರ್ಸ್ ಫೋರ್ಂ ಪ್ರಧಾನ ಕಾರ್ಯದರ್ಶಿ ಒಲ್ಲೆಂಶೋ ಸಿಮೋಸ್, ಸಂಪೂರ್ಣ ಕರಾವಳಿ ಬಂದರು ಇಲಾಖೆಯದ್ದು ಎಂದು ಹೇಳಲಾಗುತ್ತಿದೆ. ಇವರು ಮೀನುಗಾರಿಕೆಯನ್ನು ಅಕ್ರಮ ಎಂದು ಹೇಳುತ್ತಿದ್ದಾರೆ ಎಂದು ಮಾಹಿತಿ ಇದೆ. ಮೀನುಗಾರಿಕೆ ನಡೆಸಲು ಲೀಸ್ ಪಡೆಯಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಂತೆ ಕರಾವಳಿ ಮೀನುಗಾರರ ಹಕ್ಕು ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ವಿಕಾಸ ತಾಂಡೇಲ ಮಾತನಾಡಿ, ಬಂದರುಗಳೇ ಬೇಡ ಎನ್ನುತ್ತಿಲ್ಲ. ಆದರೆ, ಮೀನುಗಾರರ ಹಕ್ಕು ಕಸಿದುಕೊಂಡು ಬಂದರು ಮಾಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಉತ್ತರ ಕನ್ನಡ ಕರಾವಳಿ ಸೂಕ್ಷ್ಮ ಪ್ರದೇಶ. ಬಂದರಿನಂತೆ ರೆಡ್ ಕೆಟಗರಿಯಲ್ಲಿರುವ ಕೈಗಾರಿಕೆ ತರಬಾರದು. ಕದಂಬ ನೌಕಾನೆಲೆ ಪಕ್ಕದಲ್ಲೇ ಇರುವುದರಿಂದ ಖಾಸಗಿ ಬಂದರಿಂದ ಸುರಕ್ಷತೆಯ ಪ್ರಶ್ನೆಯೂ ಉಂಟಾಗಲಿದೆ ಎಂದರು. ಬಂದರು ನಿರ್ಮಾಣವಾದ ಬಳಿಕ ಸ್ಥಳೀಯ ಪಂಚಾಯತ್ ಕಾನೂನು ಅನ್ವಯ ಆಗುವುದಿಲ್ಲ. ಪೋರ್ಟ್ ವ್ಯಾಪ್ತಿಯಲ್ಲಿ ಅವರದ್ದೇ ಕಾನೂನು ಇರಲಿದೆ ಎಂದರು.
ಸದಸ್ಯರಾದ ವೆಂಕಟೇಶ್, ಉಜ್ವಲಾ ಪಾಟೀಲ್, ಸಂಜೀವ ಬಲೆಗಾರ, ಜ್ಞಾನೇಶ್ವರ ಹರಿಕಂತ್ರ, ನಿಲೇಶ ಹರಿಕಂತ್ರ ಮತ್ತಿತರರು ಇದ್ದರು.