ಜಂಟಿ ಸರ್ವೆ ನಂತರ ಬೇಡಿಕೆ ಈಡೇರಿಕೆ: ಡಿಸಿ ನಾಗರಾಜ್ ಭರವಸೆ

KannadaprabhaNewsNetwork |  
Published : Feb 28, 2026, 01:30 AM IST
 ನರಸಿಂಹರಾಜಪುರ ತಾಲೂಕು ಕಚೇರಿ ಎದುರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ನಾಗರಾಜ್ ಅವರಿಗೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ತರೀಕೆರೆ ಎನ್ ವೆಂಕಟೇಶ್ ಮನವಿ ಪತ್ರ ಅರ್ಪಿಸಿದರು.  | Kannada Prabha

ಸಾರಾಂಶ

ನರಸಿಂಹರಾಜಪುರದಲಿತ ಸಂಘರ್ಷ ಸಮಿತಿಯವರು ಕಳೆದ 12 ದಿನಗಳಿಂದ ಭೂಮಿಗಾಗಿ ನಡೆಸುತ್ತಿದ್ದ ಆಹೋರಾತ್ರಿ ಧರಣಿಯನ್ನು ಶುಕ್ರವಾರ ಜಿಲ್ಲಾಧಿಕಾರಿ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೈ ಬಿಟ್ಟಿದ್ದಾರೆ.

ದಸಂಸದಿಂದ ಆಹೋ ರಾತ್ರಿ ಧರಣಿ 12 ದಿನಗಳ ನಂತರ ವಾಪಾಸ್‌

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಲಿತ ಸಂಘರ್ಷ ಸಮಿತಿಯವರು ಕಳೆದ 12 ದಿನಗಳಿಂದ ಭೂಮಿಗಾಗಿ ನಡೆಸುತ್ತಿದ್ದ ಆಹೋರಾತ್ರಿ ಧರಣಿಯನ್ನು ಶುಕ್ರವಾರ ಜಿಲ್ಲಾಧಿಕಾರಿ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೈ ಬಿಟ್ಟಿದ್ದಾರೆ.

ತಾಲೂಕು ಕಚೇರಿ ಬಳಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಾಗರಾಜ್ ಅ‍ವರಿಗೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಬೇಡಿಕೆ ಪತ್ರ ಸಲ್ಲಿಸಿದರು. ಪ.ಜಾತಿ, ಪಂಗಡವರಿಗೆ ಶೇ.50 ರಷ್ಟು ಭೂಮಿ ಮೀಸಲಿಡಬೇಕು. ಅರಣ್ಯ ಇಲಾಖೆಗೆ ಸರ್ಕಾರ ನೀಡಿದ ಕಿರು ಅರಣ್ಯ, ಕೆರೆ ಅಂಗಳ, ಗೋಮಾಳ ಮತ್ತು ಡೀಮ್ಡ್ ಫಾರೆಸ್ಟ್ ನ್ನು ವಾಪಾಸ್‌ ಪಡೆದು ಭೂ ಹೀನ ದಲಿತರಿಗೆ ನೀಡಬೇಕು. ನರಸಿಂಹರಾಜಪುರದ ರಾವೂರು, ಹಂದೂರು ಗ್ರಾಮ, ಮೀನು ಕ್ಯಾಂಪ್, ಶಿರಗಳಲೆ, ನಾಗಲಾಪುರ ಗ್ರಾಮದಲ್ಲಿ ಜಮೀನು ಲಭ್ಯವಿದೆ ಎಂಬ ಮಾಹಿತಿಇದೆ. ಭೂಮಿ ಮಂಜೂರು ಮಾಡುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, ಅರಣ್ಯ ಹಾಗೂ ಕಂದಾಯ ಭೂಮಿಗಳ ಜಂಟಿ ಸರ್ವೆ ನಂತರ ಕಂದಾಯ ಭೂಮಿ ಜಿಲ್ಲಾಧಿಕಾರಿ ವಶಕ್ಕೆ ಬರುತ್ತದೆ. ಆನಂತರ ಕ್ರಮ ಸಾಧ್ಯ. ಮೇ ವರೆಗೆ ಅವಕಾಶ ನೀಡಿ ಧರಣಿ ವಾಪಾಸು ಪಡೆಯಿರಿ. ಕಂದಾಯ ಭೂಮಿ ಅರಣ್ಯಕ್ಕೆ ಸೇರಿದ್ದರೆ ವಾಪಾಸು ಪಡೆಯಲು ಬದಲಿ ಭೂಮಿ ನೀಡಬೇಕು. ಕಾನೂನಿನ ತೊಡಕು ಇದೆ. ಸೊಪ್ಪಿನಬೆಟ್ಟ, ಗೋಮಾಳ ಎರಡೂ ಒಟ್ಟಾಗಿದೆ. ಇದನ್ನು ಸರ್ವೆ ಮಾಡಿದ ನಂತರ ಬೇರೆ ಮಾಡಬೇಕಾಗಿದೆ. ಗೋಮಾಳ ಭೂಮಿ ದಲಿತರಿಗೆ ನೀಡಬಹುದು.ಆದ್ದರಿಂದ ಧರಣಿ ನಿಲ್ಲಿಸಿ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಭರವಸೆ ಮೇಲೆ ಧರಣಿ ನಿಲ್ಲಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಘೋಷಿಸಿದರು. ಈ ಸಂದರ್ಭದಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಮಾಲತಿ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

--- ಬಾಕ್ಸ್--

ಧರಣಿ ಹಿಂದಕ್ಕೆ ಪಡೆಯಲು ಒಪ್ಪಿಗೆ: ನಾಗರಾಜ್

ಕಳೆದ 12 ದಿನಗಳಿಂದ ಭೂಮಿಗಾಗಿ ಎನ್‌.ಆರ್. ಪುರ ತಾಲೂಕು ಕಚೇರಿ ಎದುರು ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆ ನ್ಯಾಯಯುತ. ಮಂಜೂರಾದ ಭೂಮಿಯಲ್ಲಿ ಶೇ. 50 ರಷ್ಟು ದಲಿತರಿಗೆ ಮೀಸಲಿಡಬೇಕಾಗುತ್ತದೆ. ಆದರೆ, ಅರಣ್ಯ ಹಾಗೂ ಕಂದಾಯ ಭೂಮಿ ಯಾವುದು ಎಂಬ ಗೊಂದಲವಿದ್ದು ಜಂಟಿ ಸರ್ವೆ ನಂತರ ಸ್ಪಷ್ಟವಾಗಿ ತಿಳಿಯುತ್ತದೆ. ಆ ವರೆಗೆ ಧರಣಿ ಹಿಂದಕ್ಕೆ ಪಡೆಯಲು ಒಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ನಾಗರಾಜ್ ಹೇಳಿದರು.

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರು 94 ಸಿ ಹಾಗೂ 94 ಸಿಸಿ ಅಡಿ ಅರ್ಜಿ ಸಲ್ಲಿಸದೆ ಇರುವುವರೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರರಿಗೆ ಸಚಿವ ಸ್ಥಾನ ನೀಡಿ
56 ಸಾವಿರ ಹುದ್ದೆಗಳ ಭರ್ತಿ ಹೇಳಿಕೆ ಬಿಜೆಪಿ ಹೋರಾಟದ ಫಲ